ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ದೊರಕಿದ 1,300ಕ್ಕೂ ಹೆಚ್ಚು ವಸ್ತುಗಳನ್ನು ಬುಧವಾರ ಪ್ರಾರಂಭಗೊಂಡ ಇ-ಹರಾಜಿನಲ್ಲಿ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಯೋಧ್ಯಾ ರಾಮ ಮಂದಿರ ಮಾದರಿ, ಭವಾನಿ ದೇವಿಯ ವಿಗ್ರಹ, 2024ರ ಒಲಿಂಪಿಕ್ಸ್ ಕ್ರೀಡಾಕೂಟದ ಸ್ಮರಣಿಕೆಗಳು ಸೇರಿದಂತೆ 1,300ಕ್ಕೂ ಹೆಚ್ಚು ಉಡುಗೊರೆಗಳನ್ನು ಹರಾಜಿಗಿಡಲಾಗಿದೆ. ಮೋದಿಯವರ ಜನ್ಮದಿನವಾದ ಇಂದು (ಸೆ.17) ಇ-ಹರಾಜು ಪ್ರಕ್ರಿಯೆ ಆರಂಭಗೊಂಡಿದ್ದು, ಅ.2ರವರೆಗೆ ಹರಾಜು ನಡೆಯಲಿದೆ.
ಪಿಎಂ ಮೊಮೆಂಟೋಸ್ ವೆಬ್‌ಸೈಟ್ ಪ್ರಕಾರ, ಭವಾನಿ ದೇವಿಯ ಪ್ರತಿಮೆಯ ಬೆಲೆ 1,03,95,000 ರೂ. ಆಗಿದ್ದು, ರಾಮ ಮಂದಿರ ದೇವಾಲಯದ ಮಾದರಿ 5.5 ಲಕ್ಷ ರೂ. ಮೌಲ್ಯವನ್ನು ಹೊಂದಿದೆ. ಇನ್ನು ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳ ಮೂರು ಜೊತೆ ಶೂಗಳನ್ನು ಕೂಡ ಹರಾಜಿಗಿಡಲಾಗಿದ್ದು, ಪ್ರತಿ ಶೂ ಬೆಲೆ 7.7 ಲಕ್ಷ ರೂ. ಇರಲಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.