ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ತಿಮ್ಮಪ್ಪನ ದೇಗುಲದ ಪ್ರಸಾದ ತಯಾರಿಕೆಯಲ್ಲಿ ಸುಮಾರು 250 ಕೋಟಿ ರೂಪಾಯಿ ಮೌಲ್ಯದ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪ ಕೇಳಿ ಬಂದ ಬಳಿಕ ಆಂಧ್ರ ಸರಕಾರ ಅಲರ್ಟ್ ಆಗಿದ್ದು, ಈ ಬಾರಿ ಭಕ್ತರಿಗೆ ನೀಡಲಾಗುವ ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ತಿರುಮಲದಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಪ್ರಯೋಗಾಲಯ ನಿರ್ಮಿಸಲಾಗುತ್ತಿದೆ .
ಈ ಕುರಿತು ಆಂಧ್ರಪ್ರದೇಶ ಆರೋಗ್ಯ ಸಚಿವ ವೈ. ಸತ್ಯಕುಮಾರ್ ಯಾದವ್ ಮಾಹಿತಿ ನೀಡಿದ್ದು, ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ತಿರುಮಲದಲ್ಲಿ ಬೃಹತ್ ಪ್ರಯೋಗಾಲಯ ನಿರ್ಮಿಸಲಾಗುತ್ತಿದ್ದು, ಪ್ರಸಾದ ತಯಾರಿಕೆಯಲ್ಲಿ ಬಳಸಲಾಗುವ ತುಪ್ಪ, ಗೋಡಂಬಿ, ಒಣದ್ರಾಕ್ಷಿ, ಬಾದಾಮಿ, ಕಡಲೆಬೇಳೆ, ಸಕ್ಕರೆ, ಏಲಕ್ಕಿ, ಅರಿಶಿನ ಮತ್ತು ಕೆಂಪು ಮೆಣಸಿನ ಪುಡಿ ಸೇರಿದಂತೆ ಸುಮಾರು 60 ಬಗೆಯ ಪದಾರ್ಥಗಳನ್ನು ಈ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗುತ್ತದೆ ಎಂದರು.
ಫ್ರಾನ್ಸ್‌ನಿಂದ ಸುಮಾರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ “E-Tongue” (ವಿದ್ಯುನ್ಮಾನ ನಾಲಿಗೆ) ಮತ್ತು “E-Nose” (ವಿದ್ಯುನ್ಮಾನ ಮೂಗು) ಯಂತ್ರಗಳನ್ನು ತರಿಸಲಾಗುತ್ತಿದೆ. ಇವು ತುಪ್ಪದ ಗುಣಮಟ್ಟದಲ್ಲಿ ಕಂಡುಬರುವ ಸಣ್ಣ ವ್ಯತ್ಯಾಸವನ್ನೂ ಪತ್ತೆಹಚ್ಚಲಿದೆ. ಈಗಾಗಲೇ ಶೇ. 90 ರಷ್ಟು ಲ್ಯಾಬ್ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ತಿಂಗಳಿನಿಂದ ಕಾರ್ಯಾಚರಣೆ ಆರಂಭವಾಗುವ ನಿರೀಕ್ಷೆಯಿದೆಆರೋಗ್ಯ ಇಲಾಖೆ ಮತ್ತು ಟಿಟಿಡಿಯ 40 ಸಿಬ್ಬಂದಿ ಈ ಲ್ಯಾಬ್ ಅನ್ನು ನಿರ್ವಹಿಸಲಿದ್ದಾರೆ.
ಇನ್ನು ಈ ಪ್ರಯೋಗಾಲಯದಲ್ಲಿ ಬೇರೆ ಬೇರೆ 50 ಕ್ಕೂ ಹೆಚ್ಚು ಸುಧಾರಿತ ಉಪಕರಣಗಳಿರಲಿವೆ. ಇವು ಆಹಾರ ಮತ್ತು ನೀರಿನ ಮಾದರಿಗಳಲ್ಲಿ ಕಂಡುಬರುವ 200 ಬಗೆಯ ಕೀಟನಾಶಕಗಳು, ಭಾರಲೋಹಗಳು, ಸೂಕ್ಷ್ಮಜೀವಿಗಳ ಸೋಂಕು ಮತ್ತು ಪ್ರತಿಜೀವಕಗಳ ಅಂಶಗಳನ್ನು ಪತ್ತೆಹಚ್ಚಲಿವೆ ಎಂದರು.



