ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಿಂದ ಭಾರತಕ್ಕೆ ಗಡೀಪಾರಾಗಿರುವ 26/11 ದಾಳಿಯ ಉಗ್ರ ತಹವ್ವೂರ್ ರಾಣಾನನ್ನು ಎನ್ಐಎ 18 ದಿನ ತನ್ನ ಕಸ್ಟಡಿಗೆ ಪಡೆದಿದ್ದು, ಡಿಐಜಿ ಜಯ್ ರಾಯ್ ನೇತೃತ್ವದ ತಂಡ, ದೆಹಲಿಯ ಎನ್ಐಎ ಪ್ರಧಾನ ಕಚೇರಿಯಲ್ಲಿ ಬಿಗಿ ಭದ್ರತೆಯ ನಡುವೆ ವಿಚಾರಣೆ ಆರಂಭಿಸಿದೆ.
ಎನ್‌ಐಎ ಕಚೇರಿಯ ನೆಲಮಹಡಿಯಲ್ಲಿ ಆತನ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ವಿಚಾರಣೆ 3ನೇ ಮಹಡಿಯಲ್ಲಿ ನಡೆದಿದೆ. ದಿನದ 24 ಗಂಟೆಯೂ ಅಧಿಕಾರಿಗಳು ನಿಗಾವಹಿಸಿದ್ದಾರೆ. ಉಗ್ರ ರಾಣಾ ವಿಚಾರಣೆ ಹಿನ್ನೆಲೆಯಲ್ಲಿ ಎನ್ಐಎ ಪ್ರಧಾನ ಕಚೇರಿ ಸುತ್ತಲೂ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಎನ್ಐಎ ಕಚೇರಿ ಇದೀಗ ಭದ್ರಕೋಟೆಯಾಗಿ ಬದಲಾಗಿದೆ.
ತಹವ್ವೂರ್ ರಾಣಾ ಇರುವ ಸೆಲ್ 14X14 ವಿಸ್ತೀರ್ಣದ್ದಾಗಿದೆ ಹಾಗೂ ಸಿಸಿಟಿವಿ ಕ್ಯಾಮರಾ ಕಣ್ಣಾವಲಿನ ಜೊತೆಗೆ ಭದ್ರತಾ ಸಿಬ್ಬಂದಿಯ ಬಿಗಿ ಕಾವಲಿದೆ. ಅಲ್ಲದೇ ಈ ಕೊಠಡಿಯೊಳಗೆ ಎನ್‌ಐಎನ ಉನ್ನತ ಶ್ರೇಣಿಯ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ದೆಹಲಿ ನ್ಯಾಯಾಲಯ ನೀಡಿರುವ 18 ದಿನಗಳ ಕಸ್ಟಡಿ ಅವಧಿ ಮುಗಿಯುವ ತನಕ ರಾಣಾ ಇದೇ ಸೆಲ್‌ನಲ್ಲಿ ಇರಲಿದ್ದಾನೆ.
ಆತನಿಗೆ ಆಹಾರ ಮತ್ತು ಮೂಲಭೂತ ಅಗತ್ಯಗಳನ್ನು ಸೆಲ್‌ನೊಳಗೇ ಪೂರೈಸಲಾಗುತ್ತಿದೆ. ಇನ್ನು ಎನ್‌ಐಎ ಆವರಣದೊಳಗೆ ಆತನ ಚಲನವಲನಗಳು ಕಡಿಮೆ ಇರಲಿದೆ. ಎಲ್ಲಾ ವಿಚಾರಣೆಗಳು 3ನೇಮಹಡಿಯಲ್ಲಿರುವ ಸೆಲ್‌ನ ಪಕ್ಕದ ಕೋಣೆಯಲ್ಲಿ ನಡೆದಿದೆ. ಅಲ್ಲಿ 2 ಕ್ಯಾಮೆರಾಗಳು ವಿಚಾರಣೆಯನ್ನು ಚಿತ್ರೀಕರಿಸಲಿವೆ. ವಿಚಾರಣೆ ಮುಗಿದ ಬಳಿಕ ನೆಲಮಹಡಿಯ ಸೆಲ್‌ಗೆ ಸ್ಥಳಾಂತರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.