ಈಗಲ್ಟನ್ ರೆಸಾರ್ಟ್ ವಿವಾದ ಪರಿಶೀಲಿಸಿ ಮುಂದಿನ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ವಿವಾದಿತ ಈಗಲ್ಟನ್ ಗಾಲ್ಫ್ ರೆಸಾರ್ಟ್ ಬಗ್ಗೆ ಮೊಕದ್ದಮೆ ನ್ಯಾಯಾಲಯದಲ್ಲಿ ಇರುವುದರಿಂದ ಎಚ್ಚರಿಕೆಯಿಂದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕಾನೂನು ತಜ್ಞರ ಸಲಹೆಗಳನ್ನು ಪಡೆದು ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕಳೆದ ವಾರ ವಿಧಾನಸಭೆಯಲ್ಲಿ ಮಂಡಿಸಿದ 2022-23ನೇ ಸಾಲಿನ ಬಜೆಟ್ ಮೇಲೆ ಮಾತನಾಡಿದ ಪ್ರತಿಪಕ್ಷ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ದಾಖಲೆ ಸಮೇತ ಈಗಲ್ಟನ್ ರೆಸಾರ್ಟ್ ಬಗ್ಗೆ ತಮ್ಮ ಚರ್ಚೆಯ ಎರಡನೇ ದಿನವೂ ವಿಸ್ತೃತ ವಿವರ ನೀಡಿದರು. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಈಗಲ್ಟನ್ ರೆಸಾರ್ಟ್ ಜಮೀನು ವಹಿವಾಟು, ದರ ನಿಗದಿ ಸಂಬಂಧ ಸುಪ್ರೀಂ ಕೋರ್ಟ್ ಆದೇಶ, ಸರಕಾರಿ ಆದೇಶಗಳನ್ನು ಸದನದ ಮುಂದಿಟ್ಟರು.

ಈಗಲ್ಟನ್ ರೆಸಾರ್ಟ್ ಬಗ್ಗೆ ಕುಮಾರಸ್ವಾಮಿ ಅವರು ಸುದೀರ್ಘವಾಗಿ ವಿಚಾರ ಮಂಡಿಸಿದಾಗ, ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಮತ್ತು ಸದಸ್ಯರು ಬಜೆಟ್‌ಗೆ ಸಂಬಂಧಪಡದ ವಿಚಾರ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಜೆಟ್ ಬಿಟ್ಟು ಮಾತಾಡಬಾರದು ಎಂದು ಗದ್ದಲ ಆರಂಭಿಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಲು ಆರಂಭಿಸಿದಾಗ, ಚರ್ಚೆ ಉತ್ತುಂಗ ಸ್ಥಿತಿಗೇರಿತು. ಇಬ್ಬರು ನಾಯಕರು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದರು.

ಆಗ ಯಾಕೆ ಸುಮ್ಮನಿದ್ರಿ?
ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ಏನೇನು ಆಗಿದೆ ಪ್ರತಿಯೊಂದನ್ನೂ ತನಿಖೆ ಮಾಡಲಿ. ನೀವು ಅಧಿಕಾರದಲ್ಲಿದ್ರಿ, ನಾವು ಅಧಿಕಾರದಲ್ಲಿರುವಾಗ ನೀವು ಪ್ರತಿಪಕ್ಷದಲ್ಲಿದ್ರಿ. ಆಗ ಯಾಕೆ ಈ ಬಗ್ಗೆ ಪ್ರಸ್ತಾಪ ಮಾಡಲಿಲ್ಲ? ಗಾಲ್ಫ್ ಕ್ಲಬ್‌ನವರು ಅತಿಕ್ರಮಣ ಮಾಡಿದ್ದಾರೆ, ಅದನ್ನು ಮಾರಿಕೊಂಡಿದ್ದಾರೆ. ಹಾಗಾಗಿ ಚದರಡಿ ಲೆಕ್ಕದಲ್ಲಿ ದಂಡ ಹಾಕಿದ್ದಾರೆ. ಈಗ ದಾಖಲೆಗಳು ನಮ್ಮಲ್ಲಿಲ್ಲ, ಈಗ ನಾವು ಹೇಗೆ ಉತ್ತರಿಸಬೇಕು? ಈಗ ರಾಜಕೀಯಕ್ಕಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.

ದಂಡ ಹಾಕಿದವರಿಗೆ ಭಾರತ ರತ್ನ!
ಅದಕ್ಕುತ್ತರಿಸಿದ ಕುಮಾರಸ್ವಾಮಿ, ನಾನು ಅಧಿಕಾರದಲ್ಲಿದ್ದಾಗ ಯಾರೂ ಈ ವಿಷಯವನ್ನು ನನ್ನ ಮುಂದೆ ಪ್ರಸ್ತಾಪಿಸಿರಲಿಲ್ಲ. ವಿಷಯ ನನ್ನ ಮುಂದೆ ಬಂದಾಗ ಪ್ರಸ್ತಾಪ ಮಾಡಿದ್ದೇನೆ ಎಂದರು. ವಾಕ್ ಪ್ರಹಾರ ನಡೆಸುವಾಗ ಒಂದು ಹಂತದಲ್ಲಿ, ಈ ರೀತಿ ದಂಡ ಹಾಕಿದವರಿಗೆ ಭಾರತ ರತ್ನ ಕೊಡಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಒಟ್ಟಿಗೆ ಸರಕಾರ ಮಾಡಿದವರಿಗೆ ಪ್ರಶಸ್ತಿಯೂ ಇರಲಿ:
ಇದಕ್ಕೆ ರಮೇಶ್ ಕುಮಾರ್, ಒಟ್ಟೊಟ್ಟಿಗೆ ಸರಕಾರ ನಡೆಸಿದ್ದೇವೆ. ಒಬ್ಬೊಬ್ಬರೇ ಭಾರತ ರತ್ನ ತೆಗೆದುಕೊಂಡ್ರೆ ಏನು ಚಂದ? ಜೊತೆಯಲ್ಲಿಯೇ ಭಾರತ ರತ್ನ ತೆಗೆದುಕೊಳ್ಳೋಣ ಎಂದು ಟಾಂಗ್ ನೀಡಿದರು. ಸಿದ್ದರಾಮಯ್ಯ ಮಾತು ಮುಂದುವರಿಸಿ, ಕಮಿಷನ್ ವಿಚಾರ ಎತ್ತಬೇಕಿಲ್ಲ. ದಂಡ ವಿಧಿಸಿದ ₹ 982 ಕೋಟಿ ಅದಕ್ಕೆಷ್ಟು ಕಮಿಷನ್ ಹೊಡೆದುಕೊಂಡಿದ್ದಾರೆ? ಸರಕಾರದ ಭೂಕಬಳಿಕೆ ಮಾಡಿದವರ ಪರ ಯಾಕೆ ವಕಾಲತ್ತು ವಹಿಸುತ್ತಿದ್ದಾರೆ? ಒಳ ಒಪ್ಪಂದ ಮಾಡಿ ರಾಜಕೀಯ ಮಾಡಿದರೆ ನಾವು ಇದಕ್ಕೆ ಹೆದರಿಕೊಳ್ಳುವುದಿಲ್ಲ. ವಿ ಡೋಂಟ್ ಕೇರ್ ಎಂದು ಗುಡುಗಿದರು.

ಅಂತಿಮವಾಗಿ ಕುಮಾರಸ್ವಾಮಿ ಅವರು ಈಗಲ್ಟನ್ ರೆಸಾರ್ಟ್ ಮಾತ್ರವಲ್ಲ, ರಾಜ್ಯದಲ್ಲಿ ತೆಗೆದುಕೊಂಡಿರುವ ಕಾನೂನು ಬಾಹಿರ ತೀರ್ಮಾನಗಳನ್ನು ಸರಿಪಡಿಸಬೇಕು. ಅಲ್ಲದೇ ಸಂಪೂರ್ಣವಾಗಿ ತನಿಖೆ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಮನವಿ ಮಾಡಿದರು.

ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಈಗಲ್ಟನ್ ರೆಸಾರ್ಟ್ ವಿವಾದ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಅದರಲ್ಲಿ ಗೋಮಾಳ ಇತ್ಯಾದಿ ಜಮೀನಿದೆ. ನ್ಯಾಯಾಲಯವೂ ಅನೇಕ ಆದೇಶಗಳನ್ನು ನೀಡಿದೆ. ಕುಮಾರಸ್ವಾಮಿ ಅವರು ಬಹಳಷ್ಟು ವಿವರಗಳನ್ನು ಕೊಡುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಿದೆ. ನ್ಯಾಯಾಲಯದಲ್ಲಿ ಇರುವುದರಿಂದ ಕಾನೂನು ಸಲಹೆಗಳನ್ನು ಪಡೆದು, ಇದರಲ್ಲಿ ಅವ್ಯವಹಾರ ಅಥವಾ ಅಕ್ರಮ ಆಗಿರುವುದನ್ನು ಈ ಹಂತದಲ್ಲಿ ತನಿಖೆ ಮಾಡಬಹುದಾ ಎಂದು ತಿಳಿದು ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ. ಕೋರ್ಟ್‌ನಲ್ಲಿರುವುದರಿಂದ ಎಚ್ಚರಿಕೆಯಿಂದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!