ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ಬೆಳಗಿನ ಜಾವ ಪಾಕಿಸ್ತಾನದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭಾರತೀಯ ಸಮಯ ಪ್ರಕಾರ ಬೆಳಗ್ಗೆ 3:54ರ ವೇಳೆಗೆ ಸಂಭವಿಸಿದ ಈ ಭೂಕಂಪ, ನೆಲದಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದ್ದು, ತೀವ್ರತೆಯ ದರವನ್ನು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸಸ್ (GFZ) ವರದಿ ಮಾಡಿದೆ.
ಯುರೋ-ಮೆಡಿಟರೇನಿಯನ್ ಭೂಕಂಪನ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ, ಕಂಪನದ ಕೇಂದ್ರಬಿಂದು ಮುಲ್ತಾನ್ ನಗರದ ಪಶ್ಚಿಮಕ್ಕೆ ಸುಮಾರು 149 ಕಿ.ಮೀ ದೂರದಲ್ಲಿದೆ. ರಾಯಿಟರ್ಸ್ ಈ ಮಾಹಿತಿಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಸ್ಥಳೀಯ ಮೂಲಗಳಿಂದ ಲಭ್ಯವಾದ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಭೂಕಂಪದಿಂದ ಯಾವುದೇ ವ್ಯಕ್ತಿಯ ಪ್ರಾಣಹಾನಿಯಾಗಿಲ್ಲ ಮತ್ತು ಆಸ್ತಿಪಾಸ್ತಿಗೂ ತೀವ್ರ ಹಾನಿಯ ಮಾಹಿತಿ ಲಭ್ಯವಾಗಿಲ್ಲ.
ಪಾಕಿಸ್ತಾನ ಭೂಕಂಪನಶೀಲ ಪ್ರದೇಶದಲ್ಲಿಯೇ ಇರುವುದರಿಂದ ಈ ಪ್ರದೇಶದಲ್ಲಿ ಇಂತಹ ಕಂಪನಗಳು ಹೊಸದಲ್ಲ. ಪಾಕಿಸ್ತಾನವು ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ಸಧೃಢ ಘರ್ಷಣೆಯ ಸ್ಥಳದಲ್ಲಿದೆ. ಭಾರತೀಯ ಪ್ಲೇಟ್ ವರ್ಷಕ್ಕೆ ಸುಮಾರು 5 ಸೆಂಟೀಮೀಟರ್ ವೇಗದಲ್ಲಿ ಯುರೇಷಿಯನ್ ಪ್ಲೇಟ್‌ಗೆ ಚಲಿಸುತ್ತಿರುವುದರಿಂದ ಭೂಮಿಯಲ್ಲಿ ಭಾರೀ ಒತ್ತಡ ನಿರ್ಮಾಣವಾಗುತ್ತಿದ್ದು, ಇದೇ ಭೂಕಂಪಗಳ ಪ್ರಮುಖ ಕಾರಣವಾಗಿದೆ.
ಪಾಕಿಸ್ತಾನದ ಇತಿಹಾಸದಲ್ಲಿಯೇ ಹಲವಾರು ತೀವ್ರ ಭೂಕಂಪಗಳು ಸಂಭವಿಸಿವೆ. 2005ರ ಮುಜಫರಾಬಾದ್ ಭೂಕಂಪ 7.6 ತೀವ್ರತೆಯಿದ್ದು, 87,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. ಅದೇ ರೀತಿ 2007ರಲ್ಲಿ ಬಲೂಚಿಸ್ತಾನ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪವೂ 825 ಜನರ ಬಲಿಯನ್ನು ಪಡೆದುಕೊಂಡಿತ್ತು.