ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ಆಫ್ರಿಕಾ ಟಿ20 ಲೀಗ್‌ನ ಐದನೇ ಪಂದ್ಯದಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಅಮೋಘ ಪ್ರದರ್ಶನ ನೀಡುವ ಮೂಲಕ ಪ್ರಿಟೋರಿಯ ಕ್ಯಾಪಿಟಲ್ಸ್ ವಿರುದ್ಧ 48 ರನ್‌ಗಳ ಬೃಹತ್ ಜಯ ದಾಖಲಿಸಿದೆ.
ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಪರ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅಕ್ಷರಶಃ ಅಬ್ಬರಿಸಿದರು. ಕೇವಲ 47 ಎಸೆತಗಳನ್ನು ಎದುರಿಸಿದ ಅವರು 6 ಮನಮೋಹಕ ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 77 ರನ್ ಚಚ್ಚಿದರು. ಡಿಕಾಕ್ ಅವರ ಈ ಸ್ಫೋಟಕ ಅರ್ಧಶತಕದ ಬಲದಿಂದ ಸನ್ರೈಸರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 188 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು.
189 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಪ್ರಿಟೋರಿಯ ಕ್ಯಾಪಿಟಲ್ಸ್ ತಂಡ ಸನ್ರೈಸರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿತು. ನಿರಂತರವಾಗಿ ವಿಕೆಟ್ ಕಳೆದುಕೊಂಡ ಕ್ಯಾಪಿಟಲ್ಸ್ 18 ಓವರ್‌ಗಳಲ್ಲಿ ಕೇವಲ 140 ರನ್‌ಗಳಿಗೆ ಸರ್ವಪತನ ಕಂಡಿತು.
ಸೌತ್ ಆಫ್ರಿಕಾ ಟಿ20 ಲೀಗ್‌ನ ನಿಯಮದಂತೆ, ಎದುರಾಳಿ ತಂಡದ ವಿರುದ್ಧ 1.25 ಕ್ಕಿಂತ ಹೆಚ್ಚಿನ ರನ್ ರೇಟ್ ವ್ಯತ್ಯಾಸದಲ್ಲಿ ಜಯ ಸಾಧಿಸಿದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡಕ್ಕೆ ಬೋನಸ್ ಅಂಕ ಲಭಿಸಿದೆ. ಈ ಗೆಲುವಿನೊಂದಿಗೆ ಒಟ್ಟು 5 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿರುವ ಈಸ್ಟರ್ನ್ ಕೇಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

