ಮಾತನಾಡುವುದು ಸುಲಭ, ಜೀರ್ಣಿಸಿಕೊಳ್ಳುವುದು ಕಷ್ಟ : ಹೆಚ್ ಡಿ ದೇವೇಗೌಡ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದ್ದು, ಈ ಮಧ್ಯೆ ರಾಜ್ಯ ರಾಜಕೀಯದ ದಣಿವರಿಯದ ನಾಯಕ ಹೆಚ್​ ಡಿ ದೇವೇಗೌಡರು ಸಹ ಮತಬೇಟೆ ನಡೆಸಲು ಸನ್ನದ್ಧರಾಗಿದ್ದಾರೆ. ಮಾತನಾಡಲು ಯಾರ ಲೈಸೆನ್ಸ್ ಬೇಕಿಲ್ಲ, ಪ್ರತಿಯೊಬ್ಬರಿಗೂ ಮಾತನಾಡುವ ಸ್ವಾತಂತ್ರ್ಯ ಇದೆ. ಅವರು ಮಾತನಾಡಿಕೊಳ್ಳಲಿ. ಯಾರೇ ಆಗಲಿ ಮನುಷ್ಯರ ಬಗ್ಗೆ ಮಾತನಾಡುವುದು ಸುಲಭ, ಜೀರ್ಣಿಸಿಕೊಳ್ಳುವುದು ಕಷ್ಟ ಎಂದು ಸಂಸದೆ ಸುಮಲತಾ ಅಂಬರೀಶ್​ ಟೀಕೆಗೆ ಮಾಜಿ ಪ್ರಧಾನಿ ದೇವೇಗೌಡರು  ಸುಮಲತಾ ಹೆಸರು ಹೇಳದೇ ಅವರ ಮಾತಿಗೆ ತಿರುಗೇಟು ನೀಡಿದರು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ವೇಳೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮೊದಲ ಬಾರಿಗೆ ಮಂಡ್ಯ ಸಂಸದೆ ಸುಮಲತಾ ಅವರು ಹೇಳಿದ ಸ್ವಾಭಿಮಾನ ಇದ್ದವರು ಜೆಡಿಎಸ್​ನಲ್ಲಿ ಇರಲು ಸಾಧ್ಯವಿಲ್ಲ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದು, ಈ ಮಾತನ್ನು ಹೇಳಲು ಯಾರು ಅಪ್ಪಣೆ ಕೊಡಿಸಿದರು. ಮಾತನಾಡಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಇರುತ್ತದೆ. ಅವರು ಮಾತನಾಡಿಕೊಳ್ಳಲಿ. ಆದರೆ ಮಾತನಾಡಿದ್ದನ್ನು ಜೀರ್ಣಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಮಾರ್ಮಿಕವಾಗಿ ದೇವೇಗೌಡರು ಸಂಸದೆ ಸುಮಲತಾ ಅವರಿಗೆ ಟಾಂಗ್​ ಕೊಟ್ಟರು.

ಒಟ್ಟು 42 ಕಡೆ ಪ್ರಚಾರ ಮಾಡುತ್ತೇನೆ

ಮಂಡ್ಯದಲ್ಲಿ ಪಕ್ಷದ ಅಭ್ಯರ್ಥಿಯ ವಿರುದ್ಧ ಬಂಡಾಯ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ದೇವೇಗೌಡರು, ಮಂಡ್ಯ ಭಿನ್ನಮತದ ಶಮನಕ್ಕೆ ಪಕ್ಷದ ಮುಖಂಡರು ಪ್ರಯತ್ನ ಮಾಡುತ್ತಿದ್ದಾರೆ. ಮಂಡ್ಯ ಅಭ್ಯರ್ಥಿಯ ಪರ ಪ್ರಚಾರಕ್ಕೆ ಹೋಗುತ್ತೇನೆ. ಜನರ ಬಳಿ ಆಶೀರ್ವಾದ ಮಾಡಿ ಎಂದು ಕೇಳುತ್ತೇನೆ. ಜೆಡಿಎಸ್ ಅಭ್ಯರ್ಥಿ ಗೆಲ್ಲಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಚುನಾವಣೆ ಮುಗಿಯುವವರೆಗೂ ಪ್ರತಿದಿನ ಮೂರು ಕಡೆ ಪ್ರಚಾರ ಮಾಡುತ್ತೇನೆ. ಒಟ್ಟು 42 ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಉತ್ತರ ಕರ್ನಾಟಕದ ರಾಯಚೂರು, ವಿಜಯಪುರ ಭಾಗಗಳಿಗೆ ನೀರು ಹರಿಸಿದ್ದೇನೆ. ಆ ಕಡೆಯೂ ಸಹ ಪ್ರಚಾರ ಮಾಡುತ್ತೇವೆ. ಹಳೇ ಮೈಸೂರು ಭಾಗ ಸೇರಿದಂತೆ ಎಲ್ಲಾ ಕಡೆ ಪ್ರಚಾರ ಮಾಡುತ್ತೇನೆ ಎಂದು ದೇವೇಗೌಡರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!