September 2, 2026
Wednesday, September 2, 2026
spot_img

ಕಾಂಗೋದಲ್ಲಿ ಎಬೋಲಾ ಮರಣಮೃದಂಗ: 3,000ಕ್ಕೂ ಹೆಚ್ಚು ಸಾ*ವು, ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಎಬೋಲಾ ಸಾಂಕ್ರಾಮಿಕ ರೋಗವು ಭೀಕರ ರೂಪ ಪಡೆದಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರುತ್ತಿದ್ದು, ಇದುವರೆಗೆ ಈ ಮಹಾಮಾರಿಗೆ 3,000ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಕಾಂಗೋ ಇತಿಹಾಸದಲ್ಲೇ ಅತ್ಯಂತ ಘೋರ ಎನ್ನಲಾದ ಈ ಮರಣಮೃದಂಗದಲ್ಲಿ ಈವರೆಗೆ ಅಧಿಕೃತವಾಗಿ 6,186 ಸೋಂಕಿನ ಪ್ರಕರಣಗಳು ಹಾಗೂ 3,007 ಸಾವುಗಳು ದಾಖಲಾಗಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯದ ಇತ್ತೀಚಿನ ವರದಿ ಧೃಢಪಡಿಸಿದೆ.

ಮೇ ತಿಂಗಳಲ್ಲಿ ಇತುರಿ ಪ್ರಾಂತ್ಯದಲ್ಲಿ ಅಧಿಕೃತವಾಗಿ ಘೋಷಣೆಯಾದ ಈ ಸಾಂಕ್ರಾಮಿಕವು, ಇಡೀ ದೇಶವನ್ನು ತಲ್ಲಣಗೊಳಿಸಿದೆ. ಪ್ರಸ್ತುತ ಕಾಂಗೋದ ಆರು ಪ್ರಾಂತ್ಯಗಳಿಗೆ ಈ ರೋಗ ಹರಡಿದ್ದು, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಭಾರತ ಸರ್ಕಾರವು ಕೂಡ ತನ್ನ ನಾಗರಿಕರಿಗೆ ಕಾಂಗೋಗೆ ಅನಗತ್ಯ ಪ್ರಯಾಣ ಮಾಡದಂತೆ ಎಚ್ಚರಿಕೆ ನೀಡಿದೆ.

ನಿಯಂತ್ರಣಕ್ಕೆ ಅಡ್ಡಿಯಾಗುತ್ತಿರುವ ಸವಾಲುಗಳೇನು?

ಶೇ. 60 ರಷ್ಟು ರೋಗಿಗಳು ಆಸ್ಪತ್ರೆ ಅಥವಾ ಚಿಕಿತ್ಸಾ ಕೇಂದ್ರಗಳನ್ನು ತಲುಪುವ ಮುನ್ನವೇ ಪ್ರಾಣ ಬಿಡುತ್ತಿದ್ದಾರೆ. ಇದರಿಂದಾಗಿ ರೋಗಿಗಳನ್ನು ಮೊದಲೇ ಗುರುತಿಸಿ ಚಿಕಿತ್ಸೆ ನೀಡುವುದು ವೈದ್ಯರಿಗೆ ದೊಡ್ಡ ಸವಾಲಾಗಿದೆ. ಅದೇ ರೀತಿ ಮತ್ತೊಂದು ದೊಡ್ಡ ಸವಾಲೆಂದರೆ ಪೂರ್ವ ಕಾಂಗೋದಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧಗಳು, ವೈದ್ಯಕೀಯ ಸಿಬ್ಬಂದಿ ಮೇಲಿನ ದಾಳಿಗಳು ಮತ್ತು ಗಣಿಗಾರರ ನಿರಂತರ ವಲಸೆಯು ರೋಗ ನಿಯಂತ್ರಣಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಇನ್ನು, ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, 4 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಪುಟ್ಟ ಮಕ್ಕಳಲ್ಲಿ ಈ ರೋಗದ ಮರಣ ಪ್ರಮಾಣವು ಶೇ. 60 ರಷ್ಟಿದೆ. ಇದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಭೀತಿಯ ನಡುವೆಯೇ ಶಾಲೆಗಳು ಓಪನ್

ಸೋಂಕು ಹೆಚ್ಚಾಗುತ್ತಿರುವ ಈ ಕಠಿಣ ಸಮಯದಲ್ಲಿ ಇತುರಿ ಪ್ರಾಂತ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸಲಾಗಿದೆ. ತರಗತಿಗಳಲ್ಲಿ ಮಕ್ಕಳಿಗೆ ಸೋಂಕು ಹರಡುವ ಭೀತಿಯಿಂದಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ. ಕೆಲವು ಖಾಸಗಿ ಶಾಲೆಗಳಲ್ಲಿ ಸ್ಯಾನಿಟೈಸರ್ ಮತ್ತು ಥರ್ಮಾಮೀಟರ್ ವ್ಯವಸ್ಥೆ ಮಾಡಲಾಗಿದ್ದರೂ, ಗ್ರಾಮೀಣ ಭಾಗದ ನೂರಾರು ಶಾಲೆಗಳಿಗೆ ಕನಿಷ್ಠ ಶುದ್ಧ ಕುಡಿಯುವ ನೀರಿನ ಸೌಲಭ್ಯವೂ ಇಲ್ಲದಿರುವುದು ದುರಂತವೇ ಸರಿ.‌

ಇದನ್ನೂ ಓದಿ:

ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಇಲ್ಲ

ಪ್ರಸ್ತುತ ಕಾಂಗೋದಲ್ಲಿ ಹರಡುತ್ತಿರುವುದು ಎಬೋಲಾದ ಅತ್ಯಂತ ಅಪರೂಪದ ‘ಬುಂದಿಬುಗ್ಯೋ’ತಳಿ. ದುರದೃಷ್ಟವಶಾತ್ ಇದಕ್ಕೆ ಸದ್ಯ ಯಾವುದೇ ಅಧಿಕೃತ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸೇರಿದಂತೆ ಹಲವು ಜಾಗತಿಕ ಸಂಸ್ಥೆಗಳು ಲಸಿಕೆ ಸಂಶೋಧನೆಯಲ್ಲಿ ಹಗಲಿರುಳು ಶ್ರಮಿಸುತ್ತಿವೆ. ಸದ್ಯಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ಸಿಬ್ಬಂದಿ ಬೇರೆ ತಳಿಯ ಲಸಿಕೆಯನ್ನೇ ನೀಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಬ್ರಿಟನ್ ಸರ್ಕಾರವು ಈ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ 560 ರೂ. ಕೋಟಿಗೂ ಅಧಿಕ ಆರ್ಥಿಕ ನೆರವನ್ನು ಪ್ರಕಟಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !