Sunday, September 7, 2025

ದೇವರ ದರುಶನಕ್ಕೂ ತಟ್ಟಿದ ಗ್ರಹಣ: ಇಂದು ಪ್ರಮುಖ ದೇವಾಲಯಗಳು ಬಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಪ್ಟೆಂಬರ್ 7ರಂದು ಅಂದರೆ ಇಂದು ಆಗಸದಲ್ಲಿ ಅಪರೂಪದ ರಕ್ತಚಂದ್ರ ಗ್ರಹಣ ಗೋಚರಿಸಲಿದೆ. ಸುಮಾರು ಐದು ಗಂಟೆಗಳ ಕಾಲ ನಡೆಯುವ ಈ ಖಗೋಳೀಯ ಘಟನೆ ಭಾರತದಲ್ಲಿಯೂ ಗೋಚರವಾಗಲಿದ್ದು, ದೇಶಾದ್ಯಂತ ಹಲವು ದೇಗುಲಗಳಲ್ಲಿ ಪೂಜೆ ಹಾಗೂ ದರುಶನ ಸಮಯದಲ್ಲಿ ಬದಲಾವಣೆ ಆಗಲಿದೆ. ಖಗೋಳ ತಜ್ಞರು ಈ ಚಂದ್ರಗ್ರಹಣವನ್ನು ಅಧ್ಯಯನದ ದೃಷ್ಟಿಯಿಂದ ವೀಕ್ಷಿಸಲು ಸಜ್ಜಾಗಿದ್ದರೆ, ಧಾರ್ಮಿಕ ನಂಬಿಕೆಗಳನ್ನು ಪಾಲಿಸುವವರ ದೃಷ್ಟಿಯಲ್ಲಿ ಗ್ರಹಣದ ವೇಳೆ ದೇವರ ದರುಶನ ಹಾಗೂ ಪೂಜೆಯ ನಿಯಮಗಳು ಬದಲಾಗುತ್ತವೆ.

ಮೈಸೂರಿನ ಚಾಮುಂಡೇಶ್ವರಿ ದೇವಾಲಯ ರಾತ್ರಿ 9 ಗಂಟೆಗೆ ಬಂದ್ ಆಗಲಿದ್ದು, ಗ್ರಹಣದ ಆರಂಭ ಮತ್ತು ಅಂತ್ಯದ ವೇಳೆ ವಿಶೇಷ ಪೂಜೆ ನಡೆಯಲಿದೆ. ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ರಾತ್ರಿ 8 ಗಂಟೆಗೆ ಮುಚ್ಚಲಾಗುತ್ತದೆ. ಕೊಪ್ಪಳದ ಹುಲಿಗೆಮ್ಮ ಹಾಗೂ ಅಂಜನಾದ್ರಿ ದೇವಾಲಯಗಳಲ್ಲಿ ಸಂಜೆ 5ರಿಂದ ದರುಶನ ಇರುವುದಿಲ್ಲ. ಹೊರನಾಡಿನ ಅನ್ನಪೂರ್ಣೇಶ್ವರಿ ಗುಡಿಯಲ್ಲಿ ಮಧ್ಯಾಹ್ನ 3ರಿಂದ ಅನ್ನದಾನ ಸ್ಥಗಿತಗೊಳ್ಳುತ್ತದೆ. ಹಾಗೂ ಉಡುಪಿ ಕೃಷ್ಣ ಮಠದಲ್ಲಿ ಬೆಳಿಗ್ಗೆ 10.30ರಿಂದ 12 ಗಂಟೆಯೊಳಗೆ ಪ್ರಸಾದ ವಿತರಣೆ ಮುಗಿಸಲಾಗುವುದು. ಚಿಕ್ಕಬಳ್ಳಾಪುರದ ಪ್ರಮುಖ ದೇಗುಲಗಳು ಸಂಜೆ 4 ಗಂಟೆಗೆ ಬಂದ್ ಆಗಲಿವೆ. ಹಾಸನದ ಬೇಲೂರಿನ ಚನ್ನಕೇಶವ ದೇವಾಲಯ ಮಧ್ಯಾಹ್ನ 3.30ಕ್ಕೆ ಕ್ಲೋಸ್ ಆಗಲಿದ್ದು, ಮಡಿಕೇರಿ ಓಂಕಾರೇಶ್ವರ ಮತ್ತು ತಲಕಾವೇರಿ ದೇವಾಲಯಗಳು ಸಂಜೆ 5ಕ್ಕೆ ಬಂದ್ ಆಗಲಿವೆ.

ಆದರೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಗ್ರಹಣದ ಪರಿಣಾಮ ಇಲ್ಲ. ಇಲ್ಲಿ ಎಂದಿನಂತೆ ತ್ರಿಕಾಲ ಪೂಜೆ ನಡೆಯಲಿದ್ದು, ಭಕ್ತರಿಗೆ ದರುಶನ ಸಿಗಲಿದೆ. ಗೋಕರ್ಣದಲ್ಲಿ ಆತ್ಮಲಿಂಗದ ದರುಶನ ಸಮಯವನ್ನು ಬದಲಾಯಿಸಿದ್ದು, ರಾತ್ರಿ 9.45ರಿಂದ ಮಧ್ಯರಾತ್ರಿ 1.26ರವರೆಗೆ ಮಾತ್ರ ದರುಶನ ಸಿಗಲಿದೆ. ಬೆಳಿಗ್ಗೆ 10.45ರವರೆಗೆ ಸ್ಪರ್ಶ ದರುಶನಕ್ಕೆ ಅವಕಾಶ ನೀಡಲಾಗುತ್ತದೆ. ಬಾದಾಮಿ ಬನಶಂಕರಿ ದೇವಾಲಯ ಬಂದ್ ಆಗುವುದಿಲ್ಲ, ಗ್ರಹಣದ ಅವಧಿಯಲ್ಲಿ ದೇವಿಗೆ ನಿರಂತರ ಜಲಾಭಿಷೇಕ ನಡೆಯಲಿದೆ.

ಇದನ್ನೂ ಓದಿ