ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಸರ್ಕಾರ ಅತ್ಯಂತ ಕಠಿಣ ನಿರ್ಧಾರ ಕೈಗೊಂಡಿದೆ. ರಾಜ್ಯದ ಬೊಕ್ಕಸದ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲು ಏಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಕಾಲ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಂಬಳದಲ್ಲಿ ಶೇ. 30 ರಷ್ಟು ಕಡಿತ ಮಾಡಲು ನಿರ್ಧರಿಸಲಾಗಿದೆ.
ಶೇ. 30 ರಷ್ಟು ಕಡಿತ: ಮುಖ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಮತ್ತು ಹಿರಿಯ ಅರಣ್ಯ ಅಧಿಕಾರಿಗಳು.
ಶೇ. 20 ರಷ್ಟು ಕಡಿತ: ಕಾರ್ಯದರ್ಶಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ವಿಭಾಗೀಯ ಅರಣ್ಯ ಅಧಿಕಾರಿ ಶ್ರೇಣಿಯ ಅಧಿಕಾರಿಗಳು.
ಇದು ಶಾಶ್ವತ ವೇತನ ಕಡಿತವಲ್ಲ, ಬದಲಾಗಿ ‘ವೇತನ ಮುಂದೂಡಿಕೆ’ಯಾಗಿದೆ. ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸಿದ ನಂತರ ತಡೆಹಿಡಿಯಲಾದ ಈ ಹಣವನ್ನು ಅಧಿಕಾರಿಗಳಿಗೆ ಮರುಪಾವತಿಸಲಾಗುವುದು. ಅಷ್ಟೇ ಅಲ್ಲದೆ, ಈ ಕಡಿತವು ಪಿಂಚಣಿ, ರಜೆ ನಗದು ಅಥವಾ ಪಿಎಫ್ ನಂತಹ ಸೌಲಭ್ಯಗಳ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರದು ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ. ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಸಚಿವರು ತಮ್ಮ ವೇತನ ಬಿಟ್ಟುಕೊಡುವ ಮೂಲಕ ಈ ಆರ್ಥಿಕ ಶಿಸ್ತಿಗೆ ಮುನ್ನುಡಿ ಬರೆದಿದ್ದಾರೆ.



