ಹೊಸದಿಗಂತ ಡಿಜಿಟಲ್ ಡೆಸ್ಕ್
ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ 2025-26ರ ಸಾಲಿನ ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸಿದ್ದಾರೆ. ದೇಶದ ಆರ್ಥಿಕತೆಯು ಸದೃಢವಾದ ಹಾದಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವೇಗವನ್ನು ಪಡೆದುಕೊಳ್ಳಲಿದೆ ಎಂದು ವರದಿಯು ವಿಶ್ವಾಸ ವ್ಯಕ್ತಪಡಿಸಿದೆ.
ಮುಂದಿನ ಹಣಕಾಸು ವರ್ಷದಲ್ಲಿ (2026-27) ಭಾರತದ ಒಟ್ಟು ಆಂತರಿಕ ಉತ್ಪನ್ನ (GDP) ಬೆಳವಣಿಗೆಯ ದರವು ಶೇ. 6.8 ರಿಂದ ಶೇ. 7.2ರಷ್ಟು ಇರಬಹುದು ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ಪ್ರಸಕ್ತ ವರ್ಷದ (2025-26) ಜಿಡಿಪಿ ಬೆಳವಣಿಗೆಯನ್ನು ಶೇ. 7.4ರಷ್ಟು ನಿರೀಕ್ಷಿಸಲಾಗಿದ್ದು, ಇದು ಹಳೆಯ ಅಂದಾಜುಗಳಿಗಿಂತ ಹೆಚ್ಚಿನ ಸುಧಾರಣೆ ಕಂಡಿದೆ.
ಸರ್ಕಾರದ ಸುಧಾರಣಾ ಕ್ರಮಗಳು ಹಾಗೂ ದೇಶದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಗಟ್ಟಿಯಾಗಿರುವುದು ಆರ್ಥಿಕ ಪ್ರಗತಿಗೆ ಪುಷ್ಟಿ ನೀಡಲಿದೆ.
ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ವಿ. ಅನಂತ ನಾಗೇಶ್ವರನ್ ಅವರ ನೇತೃತ್ವದಲ್ಲಿ ಹಣಕಾಸು ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಈ ವರದಿಯನ್ನು ಸಿದ್ಧಪಡಿಸಿದ್ದಾರೆ.
ಫೆಬ್ರುವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ಗೆ ಈ ವರದಿಯು ದಿಕ್ಸೂಚಿಯಾಗಲಿದ್ದು, ಹಣದುಬ್ಬರ, ರಫ್ತು-ಆಮದು, ವಿದೇಶಿ ವಿನಿಮಯ ಹಾಗೂ ಉದ್ಯೋಗದಂತಹ ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲಿದೆ.
ಆರ್ಥಿಕತೆಯ ಜೊತೆಗೆ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ವಲಯಗಳ ಪ್ರಗತಿಯನ್ನೂ ಈ ಸಮೀಕ್ಷೆಯಲ್ಲಿ ಪರಾಮರ್ಶಿಸಲಾಗಿದೆ.
ಬಜೆಟ್ ಅಧಿವೇಶನವು ಈಗಾಗಲೇ ಚಾಲನೆ ಪಡೆದಿದ್ದು, ಎಲ್ಲರ ಕಣ್ಣು ಈಗ ಫೆಬ್ರುವರಿ 1ರ ಪೂರ್ಣ ಪ್ರಮಾಣದ ಬಜೆಟ್ ಮೇಲೆ ನೆಟ್ಟಿದೆ. ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕ ಆರೋಗ್ಯದ ಸ್ಪಷ್ಟ ಚಿತ್ರಣವನ್ನು ನೀಡಿದ್ದು, ಅಭಿವೃದ್ಧಿಯ ಓಟಕ್ಕೆ ಪೂರಕವಾದ ಅಂಶಗಳನ್ನು ಎತ್ತಿ ತೋರಿಸಿದೆ.



