ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮದ್ಯ ಹಗರಣದಲ್ಲಿ ಇಡಿ ಅಧಿಕಾರಿಗಳು ಸರಣಿ ದಾಳಿ ನಡೆಸಿ ಸಂಬಂಧಪಟ್ಟವರನ್ನು ಬಂಧಿಸಲಾಗುತ್ತಿದೆ. ಇದೀಗ ಮತ್ತಿಬ್ಬರನ್ನು ಬಂಧಿಸಲಾಗಿದೆ. ಅರಬಿಂದೋ ಫಾರ್ಮಾದ ಪೆನ್ನಕ ಶರತ್ ಚಂದ್ರ ರೆಡ್ಡಿ ಜೊತೆಗೆ ಮತ್ತೊಬ್ಬ ಮದ್ಯ ವ್ಯಾಪಾರಿ ವಿನೋದ್ ಬಾಬು ಬಂಧಿತರು.
ತೆಲುಗು ರಾಜ್ಯಗಳಿಗೆ ಸೇರಿದ ಇವರಿಬ್ಬರಿಗೂ ಮದ್ಯದ ವ್ಯವಹಾರದಲ್ಲಿ ನಂಟು ಇರುವುದನ್ನು ಇಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮದ್ಯದ ಕಂಪನಿಗಳ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದಾರೆ. ಶರತ್ ಚಂದ್ರ ರೆಡ್ಡಿ ಅರಬಿಂದೋ ಫಾರ್ಮಾ ಕಂಪನಿಯಲ್ಲಿ ಪ್ರಮುಖ ನಿರ್ದೇಶಕರಾಗಿದ್ದಾರೆ. ಈ ಗುಂಪಿನ 12 ಕಂಪನಿಗಳಿಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟ್ರೈಡೆಂಟ್ ಲೈಫ್ ಸೈನ್ಸಸ್ ಕಂಪನಿಯ ನಿರ್ದೇಶಕರಾಗಿಯೂ ಮುಂದುವರಿದಿದ್ದಾರೆ. ಸಿಬಿಐ ಎಫ್‌ಐಆರ್‌ನಲ್ಲಿ ಈ ಕಂಪನಿಯ ಹೆಸರನ್ನೂ ಸೇರಿಸಲಾಗಿದ್ದು, ಶರತ್ ಚಂದ್ರ ರೆಡ್ಡಿ ದೆಹಲಿ ಮದ್ಯದ ನೀತಿಯ ಪ್ರಕಾರ ಇಎಂಡಿಗಳನ್ನು ಪಾವತಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್ 21, 22 ಮತ್ತು 23 ರಂದು ಇಡಿ ಶರತ್ ಚಂದ್ರ ರೆಡ್ಡಿ ಅವರನ್ನು ವಿಚಾರಣೆ ನಡೆಸಿತ್ತು.
ಈಗಾಗಲೇ ಬಂಧಿತರಾಗಿರುವ ಶರತ್ ಚಂದ್ರರೆಡ್ಡಿ ಮತ್ತು ವಿನೋದ್ ಬಾಬು ಅವರನ್ನು ಇಡಿ ಅಧಿಕಾರಿಗಳು ಇಂದು ದೆಹಲಿಯ ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.