ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮದ್ಯ ನೀತಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ತನಿಖೆಯನ್ನು ಚುರುಕುಗೊಳಿಸಿದೆ. ಇಡಿ (ಜಾರಿ ನಿರ್ದೇಶನಾಲಯ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೋಟಿಸ್ ಕಳುಹಿಸಿದ್ದು, ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 2 ರಂದು ಕೇಜ್ರಿವಾಲ್ ವಿಚಾರಣೆಗೆ ಬರಬೇಕೆಂದು ನೋಟಿಸ್‌ನಲ್ಲಿ ತಿಳಿಸಿದೆ. ಪಿಎಂಎಲ್‌ಎ ಸೆಕ್ಷನ್ 50ಎ ಅಡಿಯಲ್ಲಿ ಇಡಿ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಶ್ನಿಸಲಿದ್ದಾರೆ.
ಮತ್ತೊಂದೆಡೆ, ಅಕ್ಟೋಬರ್ 30ರಂದು ಮನೀಶ್ ಸಿಸೋಡಿಯಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಪ್ರಕರಣದ ತನಿಖೆಯನ್ನು 6-8 ತಿಂಗಳೊಳಗೆ ಪೂರ್ಣಗೊಳಿಸುವಂತೆ ಆದೇಶಿಸಿದೆ.
ಈ ವರ್ಷ ಏಪ್ರಿಲ್ 16 ರಂದು ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ಒಂಬತ್ತೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿತು. ಸಿಆರ್‌ಪಿಸಿ 161ರ ಅಡಿಯಲ್ಲಿ ಮದ್ಯ ಹಗರಣದ ಕುರಿತು ಸಿಎಂ ಕೇಜ್ರಿವಾಲ್ ಹೇಳಿಕೆ ದಾಖಲಿಸಿದ್ದಾರೆ. ದೆಹಲಿ ಮದ್ಯ ಹಗರಣದ ಸಾಕ್ಷಿಗಳು ಮತ್ತು ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಸಿಬಿಐ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿತ್ತು. ಕೇಜ್ರಿವಾಲ್ ಅವರಿಂದ ಲಿಖಿತ ಮತ್ತು ಮೌಖಿಕ ಉತ್ತರಗಳನ್ನು ತೆಗೆದುಕೊಳ್ಳಲಾಗಿದ್ದು, ಸಿಸಿ ಕ್ಯಾಮೆರಾದ ಮೇಲ್ವಿಚಾರಣೆಯಲ್ಲಿ ಅಧಿಕಾರಿಗಳು ಕೇಜ್ರಿವಾಲ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ದೆಹಲಿ ಮದ್ಯ ನೀತಿ ರಚನೆ-ಅನುಷ್ಠಾನದಲ್ಲಿ ಅವ್ಯವಹಾರ, ಕಮಿಷನ್ ದರ ಹೆಚ್ಚಳ, ಸಿಎಂ ಆಗಿ ಕೇಜ್ರಿವಾಲ್ ಪಾತ್ರ, ವಿಜಯ್ ನಾಯರ್ ಸೇರಿದಂತೆ ಆರೋಪಿಗಳ ಜತೆಗಿನ ಸಂಬಂಧ, ಮನೀಶ್ ಸಿಸೋಡಿಯಾ ಸೇರಿದಂತೆ ಸಚಿವರ ಗುಂಪು ತೆಗೆದುಕೊಂಡ ನಿರ್ಧಾರಗಳಿಗೆ ಸಿಎಂ ಅನುಮೋದನೆ, ಅಬಕಾರಿ ಅಧಿಕಾರಿಗಳು ನೀಡಿದ ಹೇಳಿಕೆಗಳ ಆಧಾರದ ಮೇಲೆ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದ್ದರು.