ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ನೀಡಿರುವ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಜಾರಿ ನಿರ್ದೇಶನಾಲಯದ ಮನವಿಯ ಕುರಿತು ದೆಹಲಿ ಹೈಕೋರ್ಟ್ ಮಂಗಳವಾರ ತನ್ನ ತೀರ್ಪು ಪ್ರಕಟಿಸಲಿದೆ. ನಾಳೆ ಮಧ್ಯಾಹ್ನ 2.30ಕ್ಕೆ ಈ ಆದೇಶ ಪ್ರಕಟವಾಗಲಿದೆ.
ಮಾರ್ಚ್ 21ರಂದು ಇಡಿಯಿಂದ ಬಂಧಿಸಲ್ಪಟ್ಟಿದ್ದ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿತ್ತು. ಅದರ ಪ್ರಕಾರ ಅವರು ಶುಕ್ರವಾರವೇ ಬಿಡುಗಡೆಯಾಗಬಹುದಿತ್ತು. ಆದರೆ ಅದನ್ನು ಪ್ರಶ್ನಿಸಿ ಇಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ತನ್ನ ಆದೇಶದವರೆಗೆ ಆ ಜಾಮೀನಿಗೆ ತಡೆ ನೀಡಿತ್ತು.
ನ್ಯಾಯಾಧೀಶ ಸುಧೀರ್ ಕುಮಾರ್ ಜೈನ್ ಅವರ ರಜಾಕಾಲದ ಪೀಠವು ಜೂನ್ 21ರಂದು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ ನಂತರ ಆದೇಶವನ್ನು ಕಾಯ್ದಿರಿಸಿತ್ತು. ತಾನು ತೀರ್ಪು ನೀಡುವವರೆಗೆ ಜಾಮೀನು ಆದೇಶವನ್ನು ತಡೆಹಿಡಿಯಲು ಸೂಚಿಸಿತ್ತು.
ಇತ್ತ ಅರವಿಂದ್ ಕೇಜ್ರಿವಾಲ್ ಮನವಿಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ದೆಹಲಿ ಹೈಕೋರ್ಟ್ ತನ್ನ ಜಾಮೀನಿಗೆ ತಡೆಯಾಜ್ಞೆ ನೀಡಿರುವುದನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜೂನ್ 26ರವರೆಗೆ ಮುಂದೂಡಿದೆ.
ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಇಡಿ ಸಲ್ಲಿಸಿರುವ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಅಂತಿಮ ಆದೇಶವನ್ನು ಪ್ರಕಟಿಸುವವರೆಗೆ ನಾವು ಕಾಯುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.