ಹೊಸದಿಗಂತ ವರದಿ, ನಾಗಮಂಗಲ :
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆಶ್ರಯ ಮತ್ತು ಶ್ರೀಗಳ ಸಾನಿಧ್ಯದ ಸಂಸ್ಕಾರದಿಂದ ಕಲಿಯುವ ಶಿಕ್ಷಣ ದೇಶದ ಪ್ರಗತಿಗೆ ಪೂರಕವಾಗಿದ್ದು, ಮಾತೃ ಭೋಜನದಂತಹ ವಿಶಿಷ್ಟ ಕಾರ್ಯಕ್ರಮದಿಂದ ಅದು ಸಾಬೀತಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಇಂಧನ ಖಾತೆ ಸಚಿವ ಕ್ರಿಶನ್ ಪಾಲ್ ಗುರ್ಜಾರ್ ತಿಳಿಸಿದರು.
ತಾಲೂಕಿನ ಬಿ.ಜಿ. ನಗರದ ಪಾಂಚಜನ್ಯದಲ್ಲಿ ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆ ಹಾಗೂ ಪಿಯು ಕಾಲೇಜು ವತಿಯಿಂದ ಆಯೋಜಿಸಿದ್ದ ಮಾತೃ ಭೋಜನ ಮತ್ತು ಕಾಲೇಜು ವಾರ್ಷಿಕೋತ್ಸವ ಉದಿಶ-2024 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾರಂಭದಲ್ಲಿ ಭಾಗವಹಿಸಿರುವ ಮಹಿಳಾ ಬಳಗವನ್ನು ನೋಡಿದಾಗ ಬೇಟಿ ಬಚಾವೋ ಬೇಟಿ ಪಡಾವೋ ಎಂಬುದು ಸಾರ್ಥಕವಾಗಿದೆ ಎಂಬ ನಂಬಿಕೆ ಇಲ್ಲಿಂದ ವೇದ್ಯವಾಗಿದೆ, ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದರು.
ಹಿರಿಯ ಚಲನಚಿತ್ರ ಅಭಿನೇತ್ರಿ ಪದ್ಮಾವಾಸಂತಿ ಮಾತನಾಡಿ, ಶ್ರೀಕೃಷ್ಣ ಪರಮಾತ್ಮನಂತೆ ಇಲ್ಲಿನ ವಿದ್ಯಾರ್ಥಿಗಳಿಗೂ ಹೆತ್ತ ಮಾತೆ ಹಾಗೂ ಕಲಿಸುವ ಗುರುಮಾತೆ ಎಂಬ ಇಬ್ಬರು ತಾಯಂದಿರು. ನನಗೂ ಕೂಡ ಇಲ್ಲಿ ಸೇರಿರುವ ಎಲ್ಲ ಮಾತೆಯರು ನೀಡಿದ ಕೈ ತುತ್ತು ಗುರು ಸಾನಿಧ್ಯದಲ್ಲಿ ನನ್ನ ಜನ್ಮವನ್ನು ಪಾವನಗೊಳಿಸಿದೆ ಎಂದು ಭಾವ ಪರವಶರಾದರು.
ಸಮಾರಂಭದ ಸಾನಿಧ್ಯವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮಾತೃ ಭೋಜನ ಎಂಬುದು ನೂತನ ಪರಿಭಾಷೆಯಲ್ಲಿ ಮೂಡಿಬಂದ ಸನಾತನ ಸಂಸ್ಕೃತಿಯ ವಿಶಿಷ್ಟ ಕಾರ್ಯಕ್ರಮ ಎಂದರು.
ವಿಜ್ಞಾನ ತಂತ್ರಜ್ಞಾನದ ಆಧುನಿಕ ಜಗತ್ತು ವೇಗವಾಗಿ ಸಾಗುತ್ತಿದ್ದರೂ ನಮ್ಮ ದೇಶವು ಸಂಸ್ಕೃತಿ-ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಮಾದರಿಯಾಗಿ ಸಾಗುತ್ತಿದೆ. ತಾಯಿಯ ಕೈತುತ್ತು ಮಕ್ಕಳ ಸವಾರ್ಂಗಿಣ ಅಭಿವೃದ್ಧಿಯ ಸಂಕೇತವಾಗಿದೆ, ಸಾಂಸ್ಕೃತಿಕ ರಾಯಭಾರಿತ್ವದ ದ್ಯೋತಕವಾಗಿ ಮಾತೃ ಭೋಜನ ಕಾರ್ಯಕ್ರಮ ಇಲ್ಲಿ ಜರುಗಿದೆ. ಮಹಾಭಾರತ ಕಾಲದಲ್ಲಿ ಕೃಷ್ಣ ರುಕ್ಮಿಣಿಯರು ಪಾಂಡವರನ್ನು ಭೋಜನಕ್ಕೆ ಕರೆಯುವ ಸಂದರ್ಭವನ್ನು, ತಾಯಿಯ ಒಂದು ಕೈ ತುತ್ತು ಭೀಮನನ್ನು ಹೇಗೆ ಭೋಜನ ಸಂತೃಪ್ತಿ ಗೊಳಿಸಿತು ಎಂಬುದನ್ನು ಸಭಿಕರಿಗೆ ತಿಳಿಸಿ ಮಾತೃ ಭೋಜನದ ಅರ್ಥವನ್ನು ಸಾರ್ಥಕಗೊಳಿಸಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ ಎ ಶೇಖರ್, ಮಾನವಿಕ ಮತ್ತು ಸಮಾಜ ವಿಜ್ಞಾನಿಗಳು ವಿಭಾಗದ ಡೀನ್ ಡಾ. ಎ ಟಿ ಶಿವರಾಮು, ಆಡಳಿತ ಮತ್ತು ಶೈಕ್ಷಣಿಕ ಸಲಹೆಗಾರ ಡಾ. ಈ. ಎಸ್. ಚಕ್ರವರ್ತಿ ಸಮಾರಂಭವನ್ನು ಕುರಿತು ಮಾತನಾಡಿದರು. ವೇದಿಕೆಯಲ್ಲಿ ವಿದ್ಯಾರ್ಥಿಗಳ ಅನಿಸಿಕೆ, ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಮಾರಂಭದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಕೇಂದ್ರ ಸಚಿವ ಭಗವಂತ ಖೂಭಾ, ರಾಜ್ಯ ಬಿಜೆಪಿ ಮುಖಂಡ ಆನಂದ್ ಗುರುಮೂರ್ತಿ, ಜಿಲ್ಲಾ ಬಿಜೆಪಿ ಮುಖಂಡರಾದ ಡಾ. ಸದಾನಂದ, ವಿಕಾಸ್ ಶುಕ್ಲ, ಡಾ. ಎನ್.ಎಸ್. ರಾಮೇಗೌಡ, ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲರು, ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ವಿ. ಪುಟ್ಟಸ್ವಾಮಿ, ಪಿಯು ಕಾಲೇಜಿನ ಪ್ರಾಂಶುಪಾಲೆ ಟಿ.ಎನ್. ಶಿಲ್ಪ, ಪಾಂಚಜನ್ಯದ ಸಂಯೋಜಕರು, ಅಧ್ಯಾಪಕ ವರ್ಗ ಸೇರಿದಂತೆ ಹಲವರು ಇದ್ದರು.