ಹೊಸ ದಿಗಂತ ವರದಿ, ತುಮಕೂರು:
ಶಿಕ್ಷಣವು ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜ ಮತ್ತು ರಾಷ್ಟ್ರದ ಪ್ರಗತಿಗೆ ಆಧಾರವಾಗಿರುವುದರಿಂದ ಶಿಕ್ಷಣವನ್ನು ಅತ್ಯುತ್ತಮ ಮತ್ತು ಸುರಕ್ಷಿತ ಸಂಪತ್ತು ಎಂದು ಕರೆಯಲಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ನಗರದ ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಜರುಗಿದ 18ನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಶಿಕ್ಷಣವನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಹಣ, ಆಸ್ತಿ ಕಾಲಾನಂತರದಲ್ಲಿ ಅಂತ್ಯವಾಗಬಹುದು. ಆದರೆ ಶಿಕ್ಷಣವು ಜೀವಿತಾವಧಿಯವರೆಗೆ ಇರುತ್ತದೆಯಲ್ಲದೆ, ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಹಾಗೂ ಯೋಚಿಸುವ ಶಕ್ತಿಯನ್ನು ನೀಡುತ್ತದೆ ಎಂದರು.
ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಪ್ರೊ. ಟಿ.ಜಿ.ಸೀತಾರಾಮ್ ತಮ್ಮ ಘಟಿಕೋತ್ಸವ ಭಾಷಣ ಮಾಡಿದರು.
76 ವಿದ್ಯಾರ್ಥಿಗಳಿಗೆ ಚಿನ್ನದ ಪದಕ –
ಘಟಿಕೋತ್ಸವದಲ್ಲಿಂದು ವಿವಿಧ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿ ಪದವಿ ಪಡೆದಿರುವ 76 ವಿದ್ಯಾರ್ಥಿಗಳಿಗೆ 106 ಚಿನ್ನದ ಪದಕ ಹಾಗೂ 4 ವಿದ್ಯಾರ್ಥಿಗಳಿಗೆ 6 ನಗದು ಬಹುಮಾನವನ್ನು ಪ್ರದಾನ ಮಾಡಲಾಯಿತು. ಅಲ್ಲದೆ ಇಬ್ಬರಿಗೆ ಡಿ.ಲಿಟ್, 59 ಮಂದಿಗೆ ಪಿಹೆಚ್.ಡಿ, 1911 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ, 9438 ವಿದ್ಯಾರ್ಥಿಗಳಿಗೆ ಪದವಿ ಸೇರಿದಂತೆ 11,349 ಮಂದಿಗೆ ಪದವಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಪ್ರಭಾರ ಕುಲಸಚಿವ ಪ್ರೊ. ಕೊಟ್ರೇಶ್ ಎಂ., ಕುಲಸಚಿವ(ಪರೀಕ್ಷಾಂಗ) ಪ್ರೊ. ಸತೀಶ್ ಗೌಡ ಎನ್., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಇದ್ದರು.