ವೃದ್ದೆಯ ದೇಹ ಬೀದಿ ನಾಯಿಗಳು ತಿಂದ ಪ್ರಕರಣ: ಘಟನಾ ಸ್ಥಳಕ್ಕೆ ಸಿಇಓ ಭೇಟಿ

ಹೊಸದಿಗಂತ ವರದಿ,ಕಲಬುರಗಿ:

ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದಲ್ಲಿ ವೃದ್ದೆಯ ದೇಹವನ್ನು ಬೀದಿ ನಾಯಿಗಳು ಎಳೆದಾಡಿ ತಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಪರ ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗಿರೀಶ್ ಡಿ. ಬದೋಲೆ ಅವರು ಮಂಗಳವಾರ ದೇವಲ ಗಾಣಗಾಪುರಕ್ಕೆ ತೆರಳಿ ಅರ್ಚಕರಿಂದ ಮಾಹಿತಿ ಪಡೆದುಕೊಂಡರು.

ಅಂದಾಜು 68 ವರ್ಷದ ವೃದ್ದೆಯನ್ನು ಅವರ ಕುಟುಂಬಸ್ಥರು ಗಾಣಗಾಪುರದಲ್ಲಿ ಬಿಟ್ಟು ಹೋಗಿದ್ದರು. ಗಾಣಗಾಪುರದಿಂದ ಸಂಗಮಕ್ಕೆ ಹೋಗುವ ಮಾರ್ಗದ ದ್ಯಾಮವ್ವ ಗುಡಿಯ ಹತ್ತಿರ ವೃದ್ದೆಯನ್ನು ಬಿಟ್ಟು ಹೋದ ಜಾಗದಲ್ಲಿ ಕತ್ತಲೆ ಆವರಿಸಿದ್ದರಿಂದ ಮೃತಪಟ್ಟಿದ್ದು ಗೊತ್ತಾಗಿಲ್ಲ. ಹೀಗಾಗಿ ರಾತ್ರಿ ಬೀದಿ ನಾಯಿಗಳು ಮೃತ ದೇಹ ತಿಂದಿರಬಹುದು ಎಂದು ದೇವಸ್ಥಾನದ ಅರ್ಚಕರು ಮಾಹಿತಿ ನೀಡಿದ್ದಾರೆ.

ಬಳಿಕ ಮಾತನಾಡಿದ ಸಿಇಒ ಡಾ. ಗಿರೀಶ್ ಬದೋಲೆ, ಇಲ್ಲಿ ಪ್ರತಿ ಹುಣ್ಣಿಮೆ ಸಂದರ್ಭದಲ್ಲಿ ಇಲ್ಲಿ ವೃದ್ದರನ್ನು ಬಿಟ್ಟು ಹೋಗುವ ರೂಢಿ ಇದೆ. ಅಂಥವರ ವಿರುದ್ಧ ಪ್ರಕರಣ ದಾಖಲಿಸುವಂತೆ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗಾಣಗಾಪುರದಲ್ಲಿ ಕತ್ತಲು ಇರುವ ಬೀದಿಗಳಲ್ಲಿ ಒಂದು ವಾರದಲ್ಲಿ ಸೋಲಾರ್ ಬೀದಿ ದೀಪ ಅಳವಡಿಸಲು ಸೂಚಿಸಲಾಗಿದೆ. ವೃದ್ಧರನ್ನು ಸರ್ಕಾರಿ ವೃದ್ಧಾಶ್ರಮದಲ್ಲಿ ದಾಖಲಿಸಬಹುದಾಗಿದೆ. ಬೀದಿನಾಯಿಗಳು ವೃದ್ದೆಯ ದೇಹ ತಿಂದ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಘಟನಾ ಸ್ಥಳಕ್ಕೆ ಜಿಲ್ಲಾಡಳಿತ ಪರವಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಣಗಾಪುರದಲ್ಲಿ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿ ಸರ್ವೆ ನಡೆಸಲು ನಿರ್ದೇಶಿಸಲಾಗಿದೆ. ಯಾರಾದರೂ ಅನಾಥ ವೃದ್ಧರಿದ್ದರೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಲು ಸೂಚಿಸಲಾಗಿದೆ. ಅಲ್ಲದೇ, ವೃದ್ದರನ್ನು ಬೀದಿಯಲ್ಲಿ ಬಿಟ್ಟು ಹೋಗುವವರ ವಿರುದ್ಧ (ಸೀನಿಯರ್ ಸಿಟಿಜನ್ ಆಕ್ಟ್ )ಹಿರಿಯ ನಾಗರೀಕ ಕಾಯ್ದೆಯಡಿ ಸ್ವಯಂಪ್ರೇರಿತ(ಸುಮೋಟೋ) ಪ್ರಕರಣ ದಾಖಲಿಸುವಂತೆ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಉಸ್ತುವಾರಿ ಸಚಿವರ ಗಮನಕ್ಕೆ ಬಾರದ ಘಟನೆ:

ವೃದ್ದೆಯ ದೇಹ ಬೀದಿ ನಾಯಿಗಳು ತಿಂದ ಘಟನೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಮುರುಗೇಶ್ ನಿರಾಣಿ ಅವರಿಗೆ ಕರೆ ಮಾಡಿ ವಿಚಾರಿಸಿದಾಗ, ಈ ಘಟನೆ ಕುರಿತು ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಂಡು ತಿಳಿಸುವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!