ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪೋಲಂಪಲ್ಲಿ ಗ್ರಾಮದಲ್ಲಿ ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.
ಜಂಗಾಲಹಳ್ಳಿ ಗ್ರಾಮದವರಾದ ಅಶ್ವತ್ಥಪ್ಪ (70) ಮತ್ತು ಹನುಮಕ್ಕ (65) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಸಾಲ ಬಾಧೆಯಿಂದ ಬೇಸತ್ತ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರೆಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಗುಡಿಬಂಡೆ ಪೋಲಿಸರು ಪರಿಶೀಲನೆ ನಡೆಸಿದ್ದಾರೆ.
ಮೂಲತಃ ಜಂಗಾಲಹಳ್ಳಿ ಗ್ರಾಮದವರಾದ ಅಶ್ವತ್ಥಪ್ಪ (70) ಮತ್ತು ಹನುಮಕ್ಕ (65) ಕೆಲ ವರ್ಷಗಳಿಂದ ಪೋಲಂಪಲ್ಲಿ ಗ್ರಾಮದಲ್ಲಿ ವಾಸವಾಗಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟು, ಸಾಲಬಾಧೆ ಹೆಚ್ಚಿದ್ದು, ಅದರಿಂದ ಬೇಸತ್ತ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಬೆಳಗ್ಗೆ ಮನೆಯಲ್ಲಿ ಇಬ್ಬರೂ ಮೂರ್ಛೆ ಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಮಾಹಿತಿ ನೀಡಿದ ನಂತರ ಗುಡಿಬಂಡೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮುಂದಿನ ತನಿಖೆ ಮುಂದುವರೆದಿದ್ದು, ದಂಪತಿ ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರ ಹೇಳಿಕೆಗಳನ್ನು ಪಡೆಯುತ್ತಿದ್ದಾರೆ.

