ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾನಾಪುರ ತಾಲ್ಲೂಕಿನ ಬೀಡಿ ಗ್ರಾಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆಗೆ ಕಾರಣವಾದ ಪ್ರಮುಖ ಆರೋಪಿಯನ್ನು ಪೊಲೀಸರು ಗುಜರಾತಿನ ಸೂರತ್ ನಲ್ಲಿ ಸೋಮವಾರ ಬಂಧಿಸಿದ್ದಾರೆ.
ಗುಜರಾತ ರಾಜ್ಯದ ಸೂರತ್ನ ನಿವಾಸಿ ಚಿರಾಗ್ ಜೀವರಾಜಬಾಯ್ ಲಕ್ಕಡ್ ಬಂಧಿತ. ಖಾನಾಪುರ ತಾಲ್ಲೂಕಿನ ನಂದಗಡ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಅಪರಾಧ ಸಂಖ್ಯೆ 32/2025 ಕಲಂ 66(ಡಿ) ಐಟಿ ಕಾಯ್ದೆ ಮತ್ತು ಕಲಂ 108, 308(2), 319(2) ಸಹಕಲಂ 3(5) ಬಿಎನ್ಎಸ್ ಅಡಿ ಪ್ರಕರಣ ದಾಖಲಿಸಲಾಗಿದೆ.
ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೀಡಿ ಗ್ರಾಮದ ಕ್ರಿಶ್ಚಿಯನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ನಿವೃತ್ತ ರೈಲ್ವೆ ಉದ್ಯೋಗಿ ಡಿಯಾಗೋ ನಜರೆತ್ (83) ಮತ್ತು ಅವರ ಪತ್ನಿ ಫ್ಲಾವಿಯಾ ನಜರೆತ್ (78) ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಾರ್ಚ್ 27 ರಂದು, ಫ್ಲಾವಿಯಾ ನಿದ್ರೆ ಮಾತ್ರೆಗಳನ್ನು ಸೇವಿಸಿ ಸಾವನ್ನಪ್ಪಿದರು, ಆದರೆ ಡಿಯಾಗೋ ತನ್ನ ಕುತ್ತಿಗೆಯನ್ನು ಕೊಯ್ದು ತಮ್ಮ ನಿವಾಸದಲ್ಲಿ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್ ದಂಪತಿಗಳು ಅನುಭವಿಸಿದ ಮಾನಸಿಕ ಯಾತನೆಯನ್ನು ಬಹಿರಂಗಪಡಿಸಿದೆ. ದೆಹಲಿ ಕ್ರೈಂ ಬ್ರಾಂಚ್ನ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರಿಂದ ಪದೇ ಪದೇ ಬೆದರಿಕೆಗಳು ಬರುತ್ತಿವೆ ಎಂದು ಡಿಯಾಗೋ ಡೆತ್ ನೋಟ್ ನಲ್ಲಿ ವಿವರಿಸಿದ್ದಾರೆ.
ದೆಹಲಿಯಲ್ಲಿ ಉನ್ನತ ಹುದ್ದೆಯಲ್ಲಿ ಇರುವುದಾಗಿ ಹೇಳಿಕೊಂಡ ವ್ಯಕ್ತಿಯೊಬ್ಬರು ನಮಗೆ ಪದೇಪದೇ ಬೆದರಿಕೆ ಹಾಕಿದ್ದಾರೆ. ನನ್ನ ಸಿಮ್ಕಾರ್ಡ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಅನಿಲ್ ಯಾದವ್ ಎಂಬ ವ್ಯಕ್ತಿ ಕರೆ ಮಾಡಿ, ‘ನಿಮ್ಮ ನಂಬರಿನಿಂದ ನನಗೆ ಬೆತ್ತಲೆ ಚಿತ್ರಗಳು, ಅಶ್ಲೀಲ ಸಂದೇಶಗಳು ರವಾನೆಯಾಗಿವೆ. ಇದರ ಬಗ್ಗೆ ಸೈಬರ್ ಸೆಲ್ಗೆ ದೂರು ನೀಡಿದ್ದಾಗಿ ಎಂದು ಬೆದರಿಸುತ್ತಿದ್ದಾರೆ’ ಎಂದು ಡಿಯಾಗೋ ಡೆತ್ನೋಟ್ ಬರೆದಿಟ್ಟಿದ್ದರು.
ಬೆದರಿಕೆಗಳಿಂದ ಗಾಬರಿಗೊಂಡ ಡಿಯಾಗೋ ಸೈಬರ್ ಅಪರಾಧಿಗಳು ನಿರ್ವಹಿಸುತ್ತಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ 59 ಲಕ್ಷ ರೂ. ಪಾವತಿಸಿದ್ದಾರೆ, ಆದರೂ ಬೆದರಿಕೆ ಮತ್ತು ಸುಲಿಗೆ ಮುಂದುವರೆಯಿತು. ಒತ್ತಡ ತಾಳಲಾರದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಯಾಗೋ ಅವರ ಎಸ್ಬಿಐ ಖಾತೆಯಿಂದ ಬಾಲಾಜಿ ಇಂಡಸ್ಟ್ರೀಸ್ ಹೆಸರಿನ ಐಡಿಎಫ್ಸಿ ಬ್ಯಾಂಕ್ ಖಾತೆಗೆ 6.10 ಲಕ್ಷ ರೂಪಾಯಿ ವಹಿವಾಟು ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.