ಹೊಸದಿಗಂತ ವರದಿ, ಮೈಸೂರು:
ಒಂಟಿ ಸಲಗವೊಂದು ವೃದ್ಧರೊಬ್ಬರ ಮೇಲೆ ದಾಳಿ ನಡೆಸಿ ಸಾಯಿಸಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿ ಬಳಿಯ ಮುದಗನೂರು ಗ್ರಾಮದ ಜಮೀನಿನ ಬಳಿ ನಡೆದಿದೆ. ಚೆಲುವಯ್ಯ (75) ಮೃತ ದುರ್ದೈವಿ.
ಇವರು ಹುಣಸೂರು ತಾಲೂಕಿನ ವೀರನಹೊಸಳ್ಳಿ ಅರಣ್ಯ ವ್ಯಾಪ್ತಿಯ ಮುದಗನೂರು ಗ್ರಾಮದ ಬಳಿ ಜಮೀನಿನಲ್ಲಿ ರಾಗಿ ಹೊರೆ ಕಟ್ಟುತ್ತಿದ್ದ ಹರವೆ ಚಲುವಯ್ಯ ಎಂಬ ವ್ಯಕ್ತಿಯ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ.
ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಆನೆ ಮೊದಲು ಕೊಣನಹೊಸಳ್ಳಿ ಗ್ರಾಮಕ್ಕೆ ಬಂದು ಅವಾಂತರ ಸೃಷ್ಟಿಸಿತ್ತು. ಗ್ರಾಮದ ಕೆಲ ಜಮೀನುಗಳಲ್ಲಿ ತಂತಿ ಕಂಬಗಳನ್ನು ಮುರಿದಿತ್ತು. ಜೊತೆಗೆ ಜಮೀನೊಂದರ ಪಂಪ್ ಸೆಟ್‌ನ ಬಾಕ್ಸ್ ಅನ್ನು ಸಹ ತುಳಿದು ನಾಶ ಪಡಿಸಿತ್ತು. ಅಲ್ಲಿಂದ ಆ ಆನೆ ಮುದುನೂರು ಬಳಿ ಬಂದು ವೃದ್ಧನ ಮೇಲೆ ದಾಳಿ ನಡೆಸಿದೆ ಎಂದು ಗೊತ್ತಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಯನ್ನು ವೀರನಹೊಸಳ್ಳಿ ಬಳಿಯ ಕಾಡಿಗೆ ಓಡಿಸಿದ್ದು, ಮೃತಪಟ್ಟ ವೃದ್ಧನಿಗೆ ಸರ್ಕಾರದಿಂದ ಬರಬೇಕಾದ ಸೌಲಭ್ಯಗಳನ್ನು ನೀಡುವುದಾಗಿ ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.