ರಸ್ತೆ ಡಾಂಬರೀಕರಣ ಮಾಡದಿದ್ದಲ್ಲಿ ಚುನಾವಣೆ ಬಹಿಷ್ಕಾರ : ಗಾಳಿಬೀಡು ಗ್ರಾಮಸ್ಥರಿಂದ ಎಚ್ಚರಿಕೆ

ಹೊಸದಿಗಂತ ವರದಿ ಮಡಿಕೇರಿ :

ಜಿಲ್ಲಾಡಳಿತದ ಕೇಂದ್ರ ಸ್ಥಾನ ಮಡಿಕೇರಿಯಿಂದ ಕೇವಲ 8 ಕಿ.ಮೀ ದೂರದಲ್ಲಿರುವ ಗಾಳಿಬೀಡು ಮತ್ತು ವಣಚಲು ಗ್ರಾಮಗಳಿಗೆ ತೆರಳುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಮುಂದಿನ 10 ದಿನಗಳೊಳಗೆ ರಸ್ತೆಯನ್ನು ಡಾಂಬರೀಕರಣ ಮಾಡದಿದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಅಲ್ಲಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ರಸ್ತೆ ಅವ್ಯವಸ್ಥೆ ಕುರಿತು ಗಮನ ಸೆಳೆದಿರುವ ಗ್ರಾಮಸ್ಥರಾದ ನಲ್ಲಪಟ್ಟಿರ ಸಂಗಮ್ ಅಯ್ಯಪ್ಪ, ದಿಶಾಂತ್ ಕೋಚನ, ಕಲ್ಲುಮುಟ್ಲು ಸದಾನಂದ, ಕರಕರನ ಮನೋಜ್ ಹಾಗೂ ಇತರರು ಜಿಲ್ಲಾ ಕೇಂದ್ರ ಸ್ಥಾನದ ಪಕ್ಕದಲ್ಲೇ ಇರುವ ರಸ್ತೆಯನ್ನು ನಿರ್ಲಕ್ಷಿಸಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಅನೇಕ ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ರಸ್ತೆ ದುರಸ್ತಿಪಡಿಸುವಂತೆ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಗ್ರಾ.ಪಂ.ಮೂಲಕ ಸರ್ಕಾರಕ್ಕೆ ಸಾಕಷ್ಟು ತೆರಿಗೆ ಹಣ ಸಂಗ್ರಹವಾಗುತ್ತದೆ. ಅಲ್ಲದೆ ಈ ಭಾಗದಲ್ಲಿ ರೆಸಾರ್ಟ್, ಹೋಂಸ್ಟೇ ಸೇರಿದಂತೆ ಪ್ರವಾಸೋದ್ಯಮಕ್ಕೆ ಪೂರಕವಾದ ಚಟುವಟಿಕೆಗಳ ಮೂಲಕವೂ ಅಧಿಕ ತೆರಿಗೆ ಪಾವತಿಯಾಗುತ್ತದೆ. ಆದರೆ ಆಡಳಿತ ವ್ಯವಸ್ಥೆ ರಸ್ತೆಯನ್ನು ಸುಸ್ಥಿತಿಯಲ್ಲಿಡುವುದನ್ನು ಮರೆತಿದೆ ಎಂದು ದೂರಿದ್ದಾರೆ.

ಕಳೆದ ಮಳೆಗಾಲದಲ್ಲಿ ಕೆರೆಯಂತಾಗಿದ್ದ ರಸ್ತೆಯಲ್ಲಿ ವಾಹನಗಳ ಸಂಚಾರ ಕಷ್ಟಕರವಾಗಿತ್ತು. ಪಾದಚಾರಿಗಳು ನಡೆದಾಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಹಳ್ಳಕೊಳ್ಳದಂತಾಗಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಮತ್ತು ಆಟೋರಿಕ್ಷಾಗಳ ಸಂಚಾರ ಅಸಾಧ್ಯವಾಗಿದೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸೇರಿಸಲು ಕೂಡಾ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ಯಂತ ಕಿರಿದಾದ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ವಿದ್ಯಾರ್ಥಿಗಳು ಹಾಗೂ ವಯೋವೃದ್ಧರ ನಿತ್ಯ ಸಂಚಾರಕ್ಕೆ ಅಡಚಣೆಯಾಗಿದೆ ಎಂದಿದ್ದಾರೆ.

ರಸ್ತೆಯನ್ನು ವಿಸ್ತರಣೆ ಮಾಡಿ ಸಂಪೂರ್ಣವಾಗಿ ಡಾಂಬರೀಕರಣ ಮಾಡಬೇಕೆಂದು ಒತ್ತಾಯಿಸಿರುವ ಗ್ರಾಮಸ್ಥರು, ಗುಂಡಿ ಮುಚ್ಚುವ ನೆಪವೊಡ್ಡಿ ತೇಪೆ ಕಾರ್ಯಕ್ಕೆ ಮುಂದಾದರೆ ಅವಕಾಶ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರ ಹಿತದೃಷ್ಟಿಯಿಂದ ರಸ್ತೆ ಸಂಪೂರ್ಣ ಡಾಂಬರೀಕರಣಗೊಳ್ಳಬೇಕು. ತಪ್ಪಿದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮಸ್ಥರು ಯಾರೂ ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!