ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ: ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಹೊಸದಿಗಂತ ವರದಿ, ಚಿತ್ರದುರ್ಗ
ಪಂಚ ರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

ಪಂಚ ರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಪಕ್ಷವು ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಂಚ ರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ದೊರೆತಿದೆ. ಅದರಲ್ಲಿ ಮಧ್ಯಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಚವ್ಹಾಣ್ ಅವರು ಈ ಬಾರಿ ಅತಿ ಹೆಚ್ಚಿನ ಸೀಟುಗಳನ್ನು ಗೆದ್ದು ಮೋದಿಯವರ ನೇತೃತ್ವದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಛತ್ತೀಸ್‌ಘಡ, ರಾಜಾಸ್ಥಾನದಲ್ಲಿಯೂ ಸಹ ಬಿಜೆಪಿ ಜಯಭೇರಿ ಬಾರಿಸಿದೆ. ಇದು ಭಾರತ ಮುಂದಿನ ದಿನಗಳಲ್ಲಿ ಅರ್ಥಿಕವಾಗಿ ಅಭಿವೃದ್ದಿಯಾಗುತ್ತದೆ ಎಂಬ ಸಂದೇಶವನ್ನು ಪ್ರಪಂಚದ ಮುಂದುವರೆದ ರಾಷ್ಟ್ರಗಳಿಗೆ ರವಾನಿಸಲಾಗಿದೆ. ಇದರಿಂದ ನಮ್ಮ ದೇಶದಲ್ಲಿ ಬಂಡವಾಳ ಹೊಡುವವರಿಗೆ ಆಕರ್ಷಣೆಯಾಗಿದೆ ಎಂದರು.
ಕಾಂಗ್ರೇಸ್‌ನವರು ಕರ್ನಾಟಕದಲ್ಲಿ ನೀಡಿದಂತೆ ಅಲ್ಲಿಯೂ ಸಹ ಗ್ಯಾರೆಂಟಿಗಳನ್ನು ನೀಡಿದ್ದರು. ಆದರೂ ಸಹ ಅಲ್ಲಿನ ಮತದಾರರು ಅದನ್ನು ತಿರಸ್ಕಾರ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಆಡಳಿತವನ್ನು ನೋಡಿ ಮತ ನೀಡಿದ್ದಾರೆ. ಈ ಮೂರು ರಾಜ್ಯಗಳಲ್ಲಿ ಬಿಜೆಪಿ ವಿಜಯ ಸಾಧಿಸಿದ್ದನ್ನು ನೋಡಿದರೆ ಮುಂದಿನ ಲೋಕಸಭಾ ಚುನವಾಣೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮಿತ್ರ ಪಕ್ಷಗಳು ೪೦೦ ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ. ಮತ್ತೆ ಮೋದಿಯವರೇ ದೇಶದ ಪ್ರಧಾನ ಮಂತ್ರಿ ಆಗಲಿದ್ದಾರೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಭಾರತವನ್ನು ಪ್ರಪಂಚದಲ್ಲಿ ಬಲಿಷ್ಠ ದೇಶವನ್ನಾಗಿ ಮಾಡಲಾಗುವುದು. ಅಲ್ಲದೇ ಆರ್ಥಿಕವಾಗಿಯೂ ಸಹ ದೇಶವನ್ನು ಸದೃಢವಾಗಿ ಮಾಡಲಾಗುವುದು. ಇದಕ್ಕೆ ಇಂದಿನ ಚುನಾವಣಾ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದ ತಿಪ್ಪಾರೆಡ್ಡಿಯವರು, ಈ ಮೂರು ರಾಜ್ಯದಲ್ಲಿ ಶೇ.೪೮ ರಷ್ಟು ಮತವನ್ನು ನೀಡಿದ್ದಾರೆ. ಮೋದಿಯವರನ್ನು ಪ್ರಪಂಚದ ನಾಯಕ ಎಂದು ಅಲ್ಲಿನ ಮತದಾರರು ತೋರಿಸಿದ್ದಾರೆ. ಇದು ಕೇವಲ ಬಿಜೆಪಿ ವಿಜಯೋತ್ಸವವಲ್ಲ ಮನೆ ಮನೆಗಳಲ್ಲಿಯೂ ಸಹ ವಿಜಯೋತ್ಸವನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎ.ಮುರಳಿ, ನಗರ ಮಂಡಲದ ಅಧ್ಯಕ್ಷ ನವೀನ್ ಚಾಲುಕ್ಯ, ಮಾಜಿ ಜಿಲ್ಲಾಧ್ಯಕ್ಷ ಟಿ.ಜಿ.ನರೇಂದ್ರನಾಥ್, ಎಸ್.ಆರ್.ಗಿರೀಶ್, ಸಂಪತ್ ಕುಮಾರ್, ಡಿ.ಕೆ.ಜಯಣ್ಣ, ಶಿವಣ್ಣಚಾರ್, ಭಾರ್ಗವಿ ದ್ರಾವಿಡ್, ದಗ್ಗೆ ಶಿವಪ್ರಕಾಶ್, ನಾಗರಾಜ ಬೇದ್ರೆ, ನಂದಿ ನಾಗರಾಜ, ಚಂದ್ರು, ತಿಪ್ಪೇಸ್ವಾಮಿ, ರೇಖಾ, ಬಸಮ್ಮ, ತಿಮ್ಮಣ್ಣ, ಶಾಂತಮ್ಮ, ಶಂಭು, ಕೃಷ್ಣ, ಯಶವಂತ್, ಪ್ರಶಾಂತ್, ಚಂದ್ರಿಕಾ ಲೋಕನಾಥ್, ಕವನ ರಾಘವೇಂದ್ರ, ಶ್ಯಾಮಲಾ ಶಿವಪ್ರಕಾಶ್  ವೀಣಾ, ಅರುಣಾ, ಪ್ರಸನ್ನ, ಕಮಲೇಶ್ ಜೈನ್, ಅನೂಸುಯಮ್ಮ ಸೇರಿದಂತೆ ಅನೇಕ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.
ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂತಸ ಹಂಚಿಕೊಳ್ಳಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!