ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ 2024ರ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಏಳು ಹಂತಗಳಲ್ಲಿ ನಡೆಯುವ ಚುನಾವಣಾ ಉತ್ಸವದ ಅದ್ಭುತ ಫಲಿತಾಂಶಗಳತ್ತ ಇಡೀ ವಿಶ್ವವೇ ಗಮನ ಹರಿಸುತ್ತಿದೆ.
ಪ್ರತಿ ಜಿಲ್ಲೆಯ ಮತ ಎಣಿಕೆಗೆ ಅಂತಿಮ ಸಿದ್ಧತೆ ಪೂರ್ಣಗೊಂಡಿದೆ. ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಮೊದಲಿಗೆ, ಅಂಚೆ ಮತಪತ್ರಗಳು ಮತ್ತು ಹಳೆಯ ಮತದಾರರ ಮತಗಳನ್ನು ಎಣಿಸಲಾಗುತ್ತದೆ. 30 ನಿಮಿಷಗಳ ನಂತರ, ಇವಿಎಂ ಮತಗಳ ಎಣಿಕೆ ಪ್ರಾರಂಭವಾಗುತ್ತದೆ. ಮಧ್ಯಾಹ್ನದ ವೇಳೆಗೆ ನಿಖರವಾದ ಪ್ರಕ್ರಿಯೆ ತಿಳಿಯುವ ನಿರೀಕ್ಷೆಯಿದೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮತ ಎಣಿಕೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ, ಬೆಂಗಳೂರು ಉತ್ತರ ಕ್ಷೇತ್ರದ ಮತ ಎಣಿಕೆ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಮತ ಎಣಿಕೆ ಜಯನಗರದ ಎಸ್ ಎಸ್ ಎಂಆರ್ ವಿ ಕಾಲೇಜಿನಲ್ಲಿ ನಡೆಯಲಿದೆ.
ಬೆಂಗಳೂರು ಗ್ರಾಮಾಂತರದ ಮತ ಎಣಿಕೆ ರಾಮನಗರದಲ್ಲಿ, ಬೆಳಗಾವಿ ಮತ ಎಣಿಕೆ ಬೆಳಗಾವಿಯಲ್ಲಿ, ಚಿಕ್ಕೋಡಿ ಮತ ಎಣಿಕೆ ಚಿಕ್ಕೋಡಿಯಲ್ಲಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ಉಡುಪಿಯಲ್ಲಿ, ಮೈಸೂರು-ಮಡಿಕೇರಿ ಕ್ಷೇತ್ರದ ಮತ ಎಣಿಕೆ ಮೈಸೂರಿನಲ್ಲಿ ಇನ್ನುಳಿದಂತೆ ಆಯಾ ಕ್ಷೇತ್ರಗಳ ಮತ ಎಣಿಕೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ.
ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದೇ ವೇಳೆ, ಸುರಪುರ ವಿಧಾನಸಭೆ ಉಪ ಚುನಾವಣೆ ಫಲಿತಾಂಶವೂ ಇಂದೇ ಪ್ರಕಟ ಆಗಲಿದೆ.