ಹೊಸದಿಗಂತ ವರದಿ ಹಾಸನ :
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆಯ ಆರ್ಭಟ ಮುಂದುವರೆದಿದ್ದು ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬಿರು ಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು, ವಿದ್ಯಾರ್ಥಿಗಳು, ಸಾರ್ವಜನಿಕರ ಪರದಾಡುವಂತಾಗಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ಬಾರಿ ಮಳೆಗೆ ವಿದ್ಯುತ್ ಕಂಬಗಳು, ಬೃಹತ್ ಮರಗಳು ರಸ್ತೆಗುರುಳಿವೆ. ಸಕಲೇಶಪುರದ ಪಟ್ಟಣದ ಹಳೇಸಂತೆವೇರಿ ರಸ್ತೆಯಲ್ಲಿ ನಿಲ್ಲಿಸಿದ್ದ ಜೀಪ್‌ನ ಮೇಲೆ ಬಾರಿ ಗಾಳಿಗೆ ಮರ ಉರುಳಿದ್ದು ಜೀಪ್ ಸಂಪೂರ್ಣ ಜಖಂಗೊಂಡಿದೆ.
ಸಕಲೇಶಪುರ-ಮೂಡಿಗೆರೆ ರಾಜ್ಯ ಹೆದ್ದಾರಿ ರಕ್ಷಿದಿ ಗ್ರಾಮದ ಸಮೀಪ ರಸ್ತೆಗೆ ಅಡ್ಡಲಾಗಿ ಮರ ಉರುಳಿದೆ. ತಾಲ್ಲೂಕಿನ ಬಾಗೆ-ಬೇಲೂರು ರಾಜ್ಯ ಹೆದ್ದಾರಿಯಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದೆ. ಇದರಿಂದ ಬಾಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಹೆಗ್ಗೊವೆ ಗ್ರಾಮದ ಕಾಫಿ ತೋಟದಲ್ಲಿ ಸಹ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿದ್ದು ಹೆಗ್ಗೊವೆ ಗ್ರಾಮದ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.