ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸರಕಾರದ ವಿರುದ್ಧ ವಿದ್ಯುತ್ ದರ ಏರಿಕೆಯಿಂದ ಜನ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ದೆಹಲಿಯಲ್ಲೂ ವಿದ್ಯುತ್ ದರ ಏರಿಕೆ ಬಿಸಿ ಮುಟ್ಟಿದೆ.
ವಿದ್ಯುತ್ ಪೂರೈಕೆ ಮಾಡುವ ಕಂಪನಿಗಳಿಗೆ ವಿದ್ಯುತ್ ದರ (Power Tariff) ಏರಿಸಲು ದೆಹಲಿ ವಿದ್ಯುತ್ ನಿಯಂತ್ರಣ ಆಯೋಗ (DERC)ವು ಅನುಮತಿ ನೀಡಿದೆ.
ವಿದ್ಯುತ್ ಸರಬರಾಜು ಕಂಪನಿಗಳಾದ ಬಿಎಸ್‌ಇಎಸ್ ಯಮುನಾ ಪವರ್ ಲಿಮಿಟೆಡ್ (BYPL)ಗೆ ಶೇ.9.42ರಷ್ಟು, ಬಿಎಸ್‌ಇಎಸ್ ರಾಜಧಾನಿ ಪವರ್ ಲಿಮಿಟೆಡ್ (BRPL)ಗೆ ಶೇ. 6.39ರಷ್ಟು ಹಾಗೂ ನ್ಯೂ ಡೆಲ್ಲಿ ಮುನ್ಸಿಪಲ್ ಕೌನ್ಸಿಲ್ (NDMC)ಗೆ ಶೇ.2ರಷ್ಟು ವಿದ್ಯುತ್ ದರ ಏರಿಕೆ ಮಾಡಲು ಡಿಇಆರ್‌ಸಿ ಅನುಮೋದನೆ ನೀಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಜನ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ 2014ರಿಂದ ವಿದ್ಯುತ್ ದರ ಏರಿಕೆ ಮಾಡಿರಲಿಲ್ಲ.
ಇತ್ತ ವಿದ್ಯುತ್ ದರ ಏರಿಕೆ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ವಿದ್ಯುತ್ ದರ ಏರಿಕೆಯಾಗಲು ಕೇಂದ್ರ ಸರ್ಕಾರವೇ ಕಾರಣವಾಗಿದೆ. ಆದಾಗ್ಯೂ, 200 ಯುನಿಟ್‌ವರೆಗೆ ವಿದ್ಯುತ್‌ಅನ್ನು ಉಚಿತವಾಗಿ ಬಳಸುವವರಿಗೆ ಬೆಲೆಯೇರಿಕೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಬೇರೆ ಗ್ರಾಹಕರು ಶೇ.8ರಷ್ಟು ಸರ್‌ಚಾರ್ಜ್ ಕಟ್ಟಬೇಕಾಗುತ್ತದೆ. ಕೇಂದ್ರ ಸರ್ಕಾರದ ಅಸಮರ್ಪಕ ನಿರ್ವಹಣೆ ಹಾಗೂ ಕಲ್ಲಿದ್ದಿಲಿನ ದರ ಹೆಚ್ಚಾದ ಕಾರಣ ವಿದ್ಯುತ್ ದರ ಏರಿಕೆಯಾಗಿದೆ ಎಂದು ದೆಹಲಿ ಸಚಿವೆ ಆತಿಶಿ ಆರೋಪಿಸಿದ್ದಾರೆ.