ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯುತ್ ದರ ಏರಿಕೆ ಹಿಂಪಡೆಯಲು ಏಳು ದಿನ ಸರ್ಕಾರಕ್ಕೆ ಗಡವು ನೀಡಲಾಗಿತ್ತು. ಸರ್ಕಾರ ಇದಕ್ಕೆ ಸ್ಪಂದಿಸದ ಕಾರಣ ಜೂ. ೨೨ ರಂದು ಬೆಳಿಗ್ಗೆ ೧೦ ಗಂಟೆಗೆ ರಾಜ್ಯಾದ್ಯಂತ ಬಂದ್ ಕರೆ ನೀಡಲಾಗುತ್ತಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ತಿಳಿಸಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಕರ್ನಾಟಕ ವಾಣಿಕ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ, ವಿದ್ಯುತ್ ದರ ಏರಿಕೆ ಸಾಮಾನ್ಯ ಜನರು ಸೇರಿದಂತೆ ಕೈಗಾರಿಕೋದ್ಯಮಿಗಳಿಗೂ ಹೊರೆಯಾಗಿದೆ. ಆದರಿಂದ ಅಂದು ಬೆಳಿಗ್ಗೆ ೧೦ ಗಂಟೆಗೆ ಸಂಸ್ಥೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದರು.
ಈಗಾಗಲೇ ಸಚಿವರಾದ ಸಂತೋಷ ಲಾಡ್, ಎಚ್.ಕೆ.ಪಾಟೀಲ, ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾಕಾರಿ ಹಾಗೂ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಮೂಲಕ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಆದರಿಂದ ಬಂದ್‌ಗೆ ಕರೆ ನೀಡಲಾಗಿದ್ದು. ರಾಜ್ಯದ ೨೫ ಜಿಲ್ಲೆಯ ಎಲ್ಲ ವಾಣಿಜ್ಯೋದ್ಯಮ ಸಂಸ್ಥೆಗಳು, ಸಾರ್ವಜನಿಕರು, ಆಟೋ ಮೋಬೈಲ್, ಎಲೆಕ್ಟ್ರಾನಿಕ್, ಎಪಿಎಂಸಿ ಸೇರಿ ಹಲವಾರು ಸಂಘ, ಸಂಸ್ಥೆಗಳು ಬೆಂಬಲ ನೀಡುತ್ತಿವೆ ಎಂದರು.
ಅಷ್ಟೇ ಅಲ್ಲದೆ ಹೋಟೆಲ್ ಉದ್ಯಮಿ, ಆಟೋ ಚಾಲಕರು, ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಬಹುದು. ಆದರೆ ಯಾರಿಗೂ ಒತ್ತಡ ಹಾಕುವುದಿಲ್ಲ. ಬಂದ್ ಮಾಡುವುದರಿಂದ ನಮಗೂ ತೊಂದರೆಯಾಗುತ್ತದೆ. ಆದರೆ ಅನಿವಾರ್ಯ ಎದುರಾಗಿದ್ದರಿಂದ ಮಾಡಲಾಗುತ್ತಿದೆ. ಗಡಿಯಲ್ಲಿರುವ ಉದ್ಯಮಗಳು ಬೇರೆ ರಾಜ್ಯಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಿದರು.
ದೇಶದ ಹಾಗೂ ರಾಜ್ಯದ ಜೆಡಿಪಿ ಹಾಗೂ ಆರ್ಥಿಕಕತೆ ಸದ್ಯ ಬೇರೆ ದೇಶಕ್ಕೆ ಹೊಲಿಸಿದರೆ ಉತ್ತಮವಾಗಿದೆ. ಇದು ಮುಂದುವರಿದುಕೊಂಡು ಹೋಗಲು ಮೂಲ ಸೌಕರ್ಯಗಳ ದರ ಸ್ಥಿರವಾಗಿರಬೇಕು. ಆದರಿಂದ ಸರ್ಕಾರ ತಕ್ಷಣ ಹಳೆ ದರ ಮುಂದುವರಿಸಬೇಕು ಎಂದರು.
ಸಂಸ್ಥೆಯ ಮಾಜಿ ಅಧ್ಯಕ್ಷ ವಸಂತ ಲದ್ವಾ ಮಾತನಾಡಿ, ಕರ್ನಾಟಕ ವಿದ್ಯುಚ್ಛಕ್ತಿ ಆಯೋಗ ನೀತಿ ಸಂಹಿತೆ ಜಾರಿಗೆಯಲ್ಲಿದ್ದಾಗ ಬೆಲೆ ಏರಿಕೆ ಮಾಡಿದ ಆದೇಶ ಹೊರಡಿಸಿದೆ. ಹೆಸ್ಕಾಂ ಬಾಕಿ ಉಳಿಸಿಕೊಂಡಿರುವ ಹಣ ಪಡೆಯದೆ, ದರ ಏರಿಸಿ ಜನಸಾಮಾನ್ಯರಿಗೆ ಹೊರೆಯಾಗುವಂತೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಮಾಜಿ ಅಧ್ಯಕ್ಷರಾದ ಶಂಕರಣ್ಣ ಮುನವಳ್ಳಿ, ಮಹೇಂದ್ರ ಲಡದ, ಪ್ರಸ್ತುತ ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ ಸೇರಿದಂತೆ ಇನ್ನಿತರ ಉದ್ಯಮಿಗಳಿದ್ದರು.