ಹೊಸದಿಗಂತ ವರದಿ ಮಡಿಕೇರಿ:
ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಬೆಳ್ಳಂಬೆಳಗ್ಗೆ ಸಿದ್ದಾಪುರ ಸಮೀಪದ ಘಟ್ಟದಳ್ಳದಲ್ಲಿ ನಡೆದಿದೆ.
ಅಲ್ಲಿನ ಹೆರೂರು ಬಿ.ತೋಟದಲ್ಲಿ ಈ ದುರ್ಘಟನೆ ನಡೆದಿದ್ದು, ಗಾಯಾಳು ಮಹಿಳೆಯನ್ನು ಪಿ.ಜೆ.ಪಲ್ಲವಿ (28) ಎಂದು ಗುರುತಿಸಲಾಗಿದೆ.
ಬುಧವಾರ ಬೆಳಗ್ಗೆ ಕೂಲಿ ಕೆಲಸಕ್ಕೆಂದು ತೆರಳುತ್ತಿದ್ದಾಗ ಕಾಡಾನೆ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಪಲ್ಲವಿ ಅವರನ್ನು ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕ ಎ.ಎಸ್.ಪೊನ್ನಣ್ಣ,ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಹಿಳೆಯ ಯೋಗಕ್ಷೇಮ ವಿಚಾರಿಸಿದರಲ್ಲದೆ, ಉನ್ನತ ಚಿಕಿತ್ಸೆ ಅಗತ್ಯವಿದ್ದರೆ ಕ್ರಮವಹಿಸುವಂತೆ ಹಾಗೂ ಪುಂಡಾನೆಯನ್ನು ಕೂಡಲೇ ಸೆರೆ ಹಿಡಿಯುವಂತೆ ಅಧಿಕಾರಿಗಳಿಗೆ ಪೊನ್ನಣ್ಣ ಸೂಚನೆ ನೀಡಿದರು.