ಹೊಸದಿಗಂತ ವರದಿ ಮಡಿಕೇರಿ:
ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಚೆಯ್ಯಂಡಾಣೆಯ ಚೇಲಾವರ ಬಳಿ ಬುಧವಾರ ಬೆಳಗ್ಗೆ ನಡೆದಿದೆ.
ಚೇಲಾವರದ ನಿವಾಸಿ ಮುಂಡ್ಯೋಳಂಡ ಜಾನಕಿ ಅಪ್ಪಯ್ಯ ಎಂಬವರೇ ಕಾಡಾನೆ ದಾಳಿಗೆ ಒಳಗಾದವರಾಗಿದ್ದು, ಘಟನೆಯಲ್ಲಿ ಅವರ ಕೈ ಮುರಿದಿದ್ದು, ಅದೃಷ್ಟವಶಾತ್ ಇತರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬುಧವಾರ ಬೆಳಗ್ಗೆ ತಮ್ಮ ಕಾಫಿ ತೋಟಕ್ಕೆ ತೆರಳುತ್ತಿದ್ದ ಸಂದರ್ಭ ಕಾಡಾನೆಯೊಂದು ಇವರ ಮೇಲೆ ಏಕಾಏಕಿ ದಾಳಿ ನಡೆಸಿರುವುದಾಗಿ ಹೇಳಲಾಗಿದೆ.
ಗಾಯಾಳುವನ್ನು ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಅವರುಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು.
ಇವರೊಂದಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಂಡ ರಂಜಿ ಪೂಣಚ್ಚ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟಲು ಕ್ರಮಕೈಗೊಳ್ಳುವಂತೆ ಶಾಸಕ ಪೊನ್ನಣ್ಣ ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣ ಬಸಪ್ಪ ಅವರಿಗೆ ನಿರ್ದೇಶನ ನೀಡಿದರು.