March 4, 2026
Wednesday, March 4, 2026
spot_img

ಆನೆ ಕಾರ್ಯಪಡೆ ಬೇಡಿಕೆಗೆ ಕೊನೆಗೂ ಮನ್ನಣೆ: ರಾಜ್ಯ ಸರಕಾರದಿಂದ ಸಿಕ್ಕಿತು ಗ್ರೀನ್ ಸಿಗ್ನಲ್!

ಹೊಸದಿಗಂತ ವರದಿ,ಮಂಗಳೂರು:

ಕಾಡಾನೆಗಳ ದಾಳಿಯಿಂದ ಕಂಗೆಟ್ಟಿದ್ದ ಕೃಷಿಕರು ಮತ್ತು ರೈತರಿಗೆ ಖುಷಿಯ ವಿಚಾರವೊಂದನ್ನು ರಾಜ್ಯ ಸರ್ಕಾರ ನೀಡಿದೆ. ಆನೆ ಕಾರ್ಯಪಡೆ ರಚಿಸಬೇಕೆಂಬ ಬಹುಕಾಲದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ.

ಯಾರೆಲ್ಲಾ ಇರಲಿದ್ದಾರೆ?
ರಾಜ್ಯ ಸರ್ಕಾರದ ಆದೇಶದಂತೆ ನೂತನ ಆನೆ ಕಾರ್ಯಪಡೆಯಲ್ಲಿ ಒಬ್ಬರು ಉಪ ವಲಯ ಅರಣ್ಯಾಧಿಕಾರಿ, ಇಬ್ಬರು ಗಸ್ತು ಅರಣ್ಯ ಪಾಲಕರು, ೨೫ ವಾಹನ ಚಾಲಕರು ಅಥವಾ ತತ್ಸಮಾನ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ಕಾರ್ಯಪಡೆ ರಚನೆಯಿಂದ ಕಾಡಂಚಿನ ಜನವಸತಿ, ಕೃಷಿ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಈ ಕಾರ್ಯಪಡೆ ಕಾರ್ಯ ನಿರ್ವಹಿಸಲಿದೆ.

ಜಿಲ್ಲೆಯ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಪ್ರತಿ ವರ್ಷ ಬೆಳೆ ಹಾನಿ ಹಾಗೂ ಮಾನವ ಸಾವಿನ ಪ್ರಕರಣಗಳು ಏರಿಕೆಯಾಗುತ್ತಿತ್ತು.. ಇದನ್ನು ಮನಗಂಡ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ.

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಽನ ಕಾರ್ಯದರ್ಶಿ ಗೀತಾ ಎಂ.ಪಾಟೀಲ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಸುಳ್ಯ ಕೇಂದ್ರ ಸ್ಥಾನ:
ಈ ಆನೆ ಕಾರ್ಯಪಡೆಯ ಕೇಂದ್ರ ಸ್ಥಾನವು ಸುಳ್ಯ ಆಗಿದ್ದು, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ದೇಶನದ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ.

ಆನೆ ಕಾರ್ಯಪಡೆ ತಂಡವು ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು, ಜನವಸತಿ, ಕೃಷಿ ಪ್ರದೇಶಗಳಲ್ಲಿ ಹಾಗೂ ಕಾಫಿ ಎಸ್ಟೇಟ್‌ಗಳಲ್ಲಿ ಆನೆಗಳ ಚಲನವಲನಗಳನ್ನು ಗುರುತಿಸಿ, ಕೂಡಲೆ ಸ್ಥಳಕ್ಕೆ ಧಾವಿಸಿ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸುವುದು. ಕಾಡಾನೆ ಹಾವಳಿ ಕಂಡುಬರುವ ಪ್ರದೇಶಗಳ ಸಾರ್ವಜನಿಕರಿಗೆ ಆನೆಗಳ ಚಲನವಲನ ಕುರಿತು ಮಾಹಿತಿ ನೀಡುವುದಲ್ಲದೆ, ಅರಣ್ಯ ಪ್ರದೇಶದ ಒಳಗೆ ಸಂಚರಿಸದಂತೆ ಪ್ರಚಾರ ಮಾಡುವುದು. ಕೇಂದ್ರ ಸ್ಥಾನದಲ್ಲಿ ನಿಯಂತ್ರಣ ಕೊಠಡಿ ಕಾರ್ಯ ನಿರ್ವಹಿಸತಕ್ಕದ್ದು ಮತ್ತು ಅದರ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಲ್ಲಿ ಪ್ರಚುರಪಡಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ಆದೇಶದಲ್ಲಿ ಸೂಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !