ಹೊಸದಿಗಂತ ವರದಿ ವಿಜಯನಗರ:
ವಿಶ್ವ ಪ್ರಸಿದ್ದ ಹಂಪಿಯಲ್ಲಿ ಜಿ-20 ಶೃಂಗಸಭೆ ನಡೆಯುತ್ತಿದ್ದು, ನಾನಾ ದೇಶಗಳಿಂದ ಆಗಮಿಸಿದ ಪ್ರತಿನಿಧಿಗಳು ಸಭೆ ಬಳಿಕ ಹಂಪಿಯ ಶ್ರೀ ವಿರುಪಾಕ್ಷೇಶ್ವರ ದರ್ಶನ ಪಡೆದು, ಸ್ಮಾರಕಗಳನ್ನು ವೀಕ್ಷಿಸಿ ಸಂಭ್ರಮಿಸಿದರು. ಅಲ್ಲದೇ 3ನೇ ಶೆರ್ಪಾ ಸಭೆಯ ಪ್ರತಿನಿಧಿಗಳನ್ನು ಶ್ರೀ ವಿರುಪಾಕ್ಷ ದೇವಾಲಯದ ಆನೆ (ಲಕ್ಷ್ಮೀ) ಹೂವು ಮಾಲೆ ಹಾಕಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಈ ರೋಮಾಂಚಕ ಕ್ಷಣಗಳನ್ನು ವೀಕ್ಷಿಸಿದ ಪ್ರತಿನಿಧಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ದೇಗುಲದಲ್ಲಿ ಜಿ-20 ಶೆರ್ಪಾ ಪ್ರತಿನಿಧಿಗಳಿಗಾಗಿ ವಿಶೇಷ ಪೂಜೆ ಪುನಸ್ಕಾರಗಳನ್ನು ಏರ್ಪಡಿಸಲಾಗಿತ್ತು. ಪ್ರತಿನಿಧಿಗಳು ಭಾರತದ ಸಂಸ್ಕೃತಿ, ಪೂಜಾ ವಿಧಿ ವಿಧಾನಗಳನ್ನು ಕಣ್ತುಂಬಿಕೊಂಡು ಶ್ರೀ ವಿರೂಪಾಕ್ಷ ದೇವರ ಕೃಪೆಗೆ ಪಾತ್ರರಾದರು.
ಹಂಪಿ ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಳಿಗೆಗಳಿಗೆ ಭೇಟಿ ನೀಡಿದರು. ವಿವಿಧ ವಸ್ತುಗಳನ್ನು ಖರೀದಿಸಿದರು. ನಂತರ ಸ್ವದೇಶಿ ವಸ್ತುಗಳ ಜೊತೆ ಫೋಟೋಗೆ ಪೋಸ್ ನೀಡಿದರು. ದಿನದ ಎಲ್ಲ ಕಾರ್ಯ ವೈಖರಿಗಳನ್ನು ಮುಗಿಸಿದ ಜಿ-20 ಪ್ರತಿನಿಧಿಗಳಿಗೆ ಮೂಡ್ ರಿಫ್ರೆಶ್ಮೆಂಟ್ ಗಾಗಿ ಹಾಗೂ ದೇಶದ ನೃತ್ಯಕಲಾ ಪ್ರಕಾರಗಳನ್ನು ಪರಿಚಯಿಸಲು, ಶನಿವಾರ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.