ಹೊಸದಿಗಂತ ವರದಿ,ಮೈಸೂರು:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕನಕಮಜಲು ಪಂಜಿಕಲ್ಲಿನಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗೆ ಶುಕ್ರವಾರ ಬೆಳ್ಳಂಬೆಳಗೆ ಆನೆಗಳ ಹಿಂಡು ದಾಳಿ ನಡೆಸಿ ಬೆಳಸಲಾಗಿದ್ದ ವಿವಿಧ ಹಣ್ಣಿನ ಗಿಡಗಳನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ.
ಅರಣ್ಯ ಇಲಾಖೆಯ ನರ್ಸರಿಯ ಸಮೀಪದಲ್ಲೇ ಪಯಸ್ವಿನಿ ನದಿ ಹರಿಯುತ್ತಿರುವುದರಿಂದ ನೀರು ಕುಡಿಯಲು ಕಾಡುಪ್ರಾಣಿಗಳು ಈ ಪ್ರದೇಶದಲ್ಲಿ ಅಡ್ಡಾಡುತ್ತಿರುತ್ತದೆ. ಅಂತೆಯೇ, ಶುಕ್ರವಾರ ಮರಿ ಆನೆ ಸೇರಿದಂತೆ ನಾಲ್ಕೈದು ಆನೆಗಳು ಅರಣ್ಯ ಇಲಾಖೆಯ ನರ್ಸರಿಗೆ ನುಗ್ಗಿದೆ. ನರ್ಸರಿಯಲ್ಲಿ ಸೊಂಪಾಗಿ ಬೆಳೆಸಲಾಗಿದ್ದ ಹಲಸು, ಹೆಬ್ಬಲಸು, ಪುನರ್ಪುಳಿ ಮತ್ತಿತರ ವಿವಿಧ ಜಾತಿಯ ಸುಮಾರು 8 ಸಾವಿರಕ್ಕೂ ಅಧಿಕ ಗಿಡಗಳನ್ನು ಕಬಳಿಸಿ ಧ್ವಂಸಗೊಳಿಸಿದೆ. ಮನಸೋ ಇಚ್ಛೆ ಗಿಡಗಳನ್ನು ಭಕ್ಷಿಸಿದ ಬಳಿಕ ಆನೆಗಳ ಹಿಂಡು ಅಲ್ಲಿಂದ ಜಾಗ ಖಾಲಿ ಮಾಡಿದೆ.
ನರ್ಸರಿಗೆ ಆನೆಗಳ ಹಿಂಡು ದಾಳಿಯಿಟ್ಟ ಸುದ್ದಿ ತಿಳಿದಾಕ್ಷಣ ಪುತ್ತೂರು ವಲಯ ಅರಣ್ಯಾಧಿಕಾರಿ ಬಿ.ಎಂ. ಕಿರಣ್ ಸ್ಥಳಕ್ಕೆ ಧಾವಿಸಿದ್ದಾರೆ. ಆನೆಗಳು ದಾಂಧಲೆ ನಡೆಸಿದ ನರ್ಸರಿಯನ್ನು ಅವರು ವೀಕ್ಷಿಸಿದರು. ನರ್ಸರಿಯಲ್ಲಿದ್ದ ಹಣ್ಣಿನ ಗಿಡಗಳ ಪೈಕಿ ಸುಮಾರು 8 ಸಾವಿರದಷ್ಟು ಗಿಡಗಳು ನಾಶವಾಗಿವೆ. ಇಲಾಖೆಗೆ ಸಾವಿರಾರು ರೂ. ನಷ್ಟವಾಗಿದೆ. ಈ ಪ್ರದೇಶದ ಸಮೀಪ ಆನೆ ಕಾರಿಡಾರ್ ಆಗಿರುವುದರಿಂದ ಆನೆಗಳ ಸಂಚಾರ ನಿರಂತರವಾಗಿರುತ್ತದೆ ಎಂದು ಕಿರಣ್ `ಹೊಸ ದಿಗಂತ’ಕ್ಕೆ ತಿಳಿಸಿದ್ದಾರೆ.
ಪಾರಾದ ಬೈಕ್ ಸವಾರರು
ಜಾಲ್ಸೂರು-ಕಾಸರಗೋಡು ರಸ್ತೆಯಲ್ಲಿ ದ್ವಿಚಕ್ರ ಸವಾರರಿಗೆ ಆನೆಯೊಂದು ಎದುರಾಗಿದ್ದು, ಅದೃಷ್ಟವಶಾತ್ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿ ಬಂದ ಘಟನೆ ನಡೆದಿದೆ. ಕರ್ನಾಟಕ-ಕಾಸರಗೋಡಿನ ಗಡಿಭಾಗ ಇದಾಗಿದ್ದು, ಈ ಪ್ರದೇಶದಲ್ಲಿ ಆನೆಗಳ ಓಡಾಟ ಹೆಚ್ಚಾಗಿರುತ್ತದೆ. ಆನೆಯೊಂದು ರಸ್ತೆಯಲ್ಲಿ ನಡೆದಾಡುತ್ತಿದ್ದ ದೃಶ್ಯವನ್ನು ಬೈಕೊಂದರಲ್ಲಿದ್ದ ಯುವಕರು ವೀಡಿಯೋ ಮಾಡುತ್ತಿದ್ದರು. ಇದೇ ಸಂದರ್ಭ ತಿರುವಿನಲ್ಲಿ ಆನೆಗೆ ಎದುರಾಗಿ ಬೈಕೊಂದು ಆಗಮಿಸಿದ್ದು, ಬೈಕಿನಲ್ಲಿದ್ದವರು ಆನೆಗೆ ಡಿಕ್ಕಿ ಹೊಡೆಯುವುದು ಕೂದಲೆಳೆಯ ಅಂತರದಲ್ಲಿ ತಪ್ಪಿ ಪಾರಾಗಿ ಬಂದಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಆನೆಯೂ ಒಮ್ಮೆಲೇ ಬೆದರಿ ಘೀಳಿಟ್ಟಿದೆ.