ಹೊಸದಿಗಂತ ವರದಿ ಮಡಿಕೇರಿ:
ನಾಡಹಬ್ಬ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಕೊಡಗಿನ ಆನೆಗಳು ಗುರುವಾರ ಜಿಲ್ಲೆಯಿಂದ ಪ್ರಯಾಣ ಬೆಳೆಸಿವೆ.
ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಲಿರುವ ಆನೆಗಳಿಗೆ ವೀರನಹೊಸಳ್ಳಿಯಲ್ಲಿ ಶುಕ್ರವಾರ ಗಜಪಯಣ ಕಾರ್ಯಕ್ರಮ ನಡೆಯಲಿದ್ದು, ಈ ಕೊಡಗಿನ ದುಬಾರೆ ಆನೆ ಶಿಬಿರದಿಂದ ಮೂರು ಹಾಗೂ ನೂತನವಾಗಿ ಆರಂಭವಾಗಿರುವ ಹಾರಂಗಿ ಶಿಬಿರದಿಂದ ಒಂದು ಆನೆಯನ್ನು ವೀರನ ಹೊಸಳ್ಳಿಗೆ ಗುರುವಾರ ಕಳುಹಿಸಿಕೊಡಲಾಗಿದೆ.
ಧನಂಜಯ, ಕಾಂಚನ, ಗೋಪಿ, ವಿಜಯ ಎಂಬ ನಾಲ್ಕು ಆನೆಗಳಿಗೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭ ಹಾಜರಿದ್ದರು.