ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಪ್ರವಾಸದ ಅಂಗವಾಗಿ ಬುಧವಾರ ನ್ಯೂಯಾರ್ಕ್‌ಗೆ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವಿಟರ್ ಸಿಇಒ ಎಲೋನ್ ಮಸ್ಕ್ ಭೇಟಿಯಾದರು. ತಾನು ಮೋದಿಯ ದೊಡ್ಡ ಅಭಿಮಾನಿ ಎಂದೂ ಮಸ್ಕ್ ಹೇಳಿದ್ದಾರೆ. ಜೊತೆಗೆ ಪ್ರಧಾನಿ ಮೋದಿಯವರ ನಾಯಕತ್ವವನ್ನು ಮಸ್ಕ್ ಹೊಗಳಿದ್ದಾರೆ.
“ಭಾರತದ ಭವಿಷ್ಯದ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ. ವಿಶ್ವದ ಯಾವುದೇ ದೊಡ್ಡ ದೇಶಕ್ಕಿಂತ ಭಾರತಕ್ಕೆ ಹೆಚ್ಚಿನ ಅವಕಾಶಗಳಿವೆ. ಪ್ರಧಾನಿ ಮೋದಿ ನಿಜವಾಗಿಯೂ ಭಾರತದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಏಕೆಂದರೆ ಮೋದಿ ನಮ್ಮನ್ನು ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತಾರೆ. ನಾನು ಮೋದಿಯವರ ಅಭಿಮಾನಿ. ಇದೊಂದು ಅದ್ಭುತ ಸಭೆ. ನನಗೆ ಮೋದಿ ಎಂದರೆ ತುಂಬಾ ಇಷ್ಟ” ಎಂದು ಎಲೋನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿಯವರನ್ನು ಭೇಟಿಯಾದ ನಂತರ ಎಲೋನ್ ಮಸ್ಕ್ ಅವರು ಭಾರತಕ್ಕೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಮೋದಿ ಅವರೊಂದಿಗಿನ ಭೇಟಿ, ಅವರೊಂದಿಗಿನ ಸಂಭಾಷಣೆ ಅತ್ಯುತ್ತಮವಾಗಿದೆ ಎಂದರು. ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಯಾದ ಸ್ಟಾರ್‌ಲಿಂಕ್ ಅನ್ನು ಭಾರತಕ್ಕೆ ತರಲು SpaceX ಯೋಜಿಸುತ್ತಿದೆ ಎಂದು ಹೇಳಿದರು.
ಇಂಟರ್‌ನೆಟ್ ಸೌಲಭ್ಯವಿಲ್ಲದ ಗ್ರಾಮೀಣ ಪ್ರದೇಶದ ಜನರಿಗೆ ಇದು ಸಹಾಯವಾಗಲಿದೆ ಎಂದು ಮಸ್ಕ್ ಹೇಳಿದ್ದಾರೆ. ಮಸ್ಕ್ ಜೊತೆಗೆ ಖಗೋಳ ಭೌತಶಾಸ್ತ್ರಜ್ಞ ಮತ್ತು ಲೇಖಕ ನೀಲ್ ಡಿ ಗ್ರಾಸ್ ಟೈಸನ್, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಪಾಲ್ ರೋಮರ್, ಲೇಖಕ ನಿಕೋಲಸ್ ನಾಸಿಮ್ ತಾಲೆಬ್ ಮತ್ತು ಹೂಡಿಕೆದಾರ ರೇ ಡಾಲಿಯೊ ಮೋದಿಯನ್ನು ಭೇಟಿಯಾದವರಲ್ಲಿ ಸೇರಿದ್ದಾರೆ.