February 16, 2026
Monday, February 16, 2026
spot_img

ಭಾರತದಲ್ಲಿ ಸ್ತಬ್ದಗೊಂಡ ಎಲಾನ್ ಮಸ್ಕ್ ಪ್ಲಾಟ್‌ಫಾರ್ಮ್: ಬಳಕೆದಾರರ ಪರದಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾರದ ಮೊದಲ ದಿನವಾದ ಸೋಮವಾರ ಸಂಜೆ ದೇಶದಾದ್ಯಂತ ಸಾವಿರಾರು ‘ಎಕ್ಸ್’ ಬಳಕೆದಾರರಿಗೆ ದೊಡ್ಡ ನಿರಾಸೆ ಎದುರಾಗಿದೆ. ಜಗತ್ತಿನ ವಿದ್ಯಮಾನಗಳನ್ನು ಅರಿಯಲು ಆ್ಯಪ್ ಓಪನ್ ಮಾಡಿದವರಿಗೆ ಖಾಲಿ ಪರದೆ ಕಾಣಿಸಿಕೊಂಡಿದ್ದು, ತಾಂತ್ರಿಕ ದೋಷದಿಂದಾಗಿ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ.

ಸೋಮವಾರ ಸಂಜೆ ಸುಮಾರು 7:00 ಗಂಟೆಯ ಹೊತ್ತಿಗೆ ಈ ಸಮಸ್ಯೆ ಆರಂಭವಾಗಿದೆ. ಬಳಕೆದಾರರು ತಮ್ಮ ಫೀಡ್ ರಿಫ್ರೆಶ್ ಮಾಡಲು ಪ್ರಯತ್ನಿಸಿದರೆ ಹೊಸ ಪೋಸ್ಟ್‌ಗಳು ಲೋಡ್ ಆಗುತ್ತಿಲ್ಲ. ಬದಲಾಗಿ ಹಳೆಯ ವಿಷಯಗಳೇ ಕಾಣಿಸುತ್ತಿವೆ ಅಥವಾ ಪೇಜ್ ಸಂಪೂರ್ಣ ಬಿಳಿಯಾಗಿ ಕಾಣುತ್ತಿದೆ.

ಇದು ಕೇವಲ ಮೊಬೈಲ್ ಆ್ಯಪ್‌ಗೆ ಮಾತ್ರ ಸೀಮಿತವಾಗಿಲ್ಲ, ಡೆಸ್ಕ್‌ಟಾಪ್ ಆವೃತ್ತಿಯಲ್ಲೂ ಇದೇ ತೊಂದರೆ ಕಾಣಿಸಿಕೊಂಡಿದೆ.

ವರದಿಗಳ ಪ್ರಕಾರ, ಸಂಜೆ 7:02ರ ವೇಳೆಗೆ 3,000ಕ್ಕೂ ಹೆಚ್ಚು ಜನರು ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಆದರೆ, ವಾಸ್ತವದಲ್ಲಿ ಈ ಸಮಸ್ಯೆಯಿಂದ ತೊಂದರೆಗೊಳಗಾದವರ ಸಂಖ್ಯೆ ಲಕ್ಷಾಂತರ ದಾಟಿದೆ.

ಆರಂಭದಲ್ಲಿ ಇದು ತಮ್ಮ ಇಂಟರ್ನೆಟ್ ಸಮಸ್ಯೆಯಿರಬಹುದು ಎಂದು ಭಾವಿಸಿದ ಬಳಕೆದಾರರು, ನಂತರ ಇತರ ಸಾಮಾಜಿಕ ಜಾಲತಾಣಗಳಲ್ಲಿ (ಇನ್‌ಸ್ಟಾಗ್ರಾಮ್, ಫೇಸ್‌ಬುಕ್) ಈ ಬಗ್ಗೆ ಚರ್ಚಿಸಲು ಶುರುಮಾಡಿದಾಗ ‘ಎಕ್ಸ್’ ಡೌನ್ ಆಗಿರುವುದು ಖಚಿತವಾಯಿತು. ಪ್ರೊಫೈಲ್‌ಗಳು ಓಪನ್ ಆಗದಿರುವುದು ಮತ್ತು ಸರ್ಚ್ ರಿಸಲ್ಟ್ ಸಿಗದಿರುವುದು ಸುದ್ದಿ ಪ್ರೇಮಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಈ ತಾಂತ್ರಿಕ ಸ್ಥಗಿತದ ಬಗ್ಗೆ ಎಲಾನ್ ಮಸ್ಕ್ ನೇತೃತ್ವದ ಕಂಪನಿಯಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಹೀಗಾಗಿ, ಪದೇ ಪದೇ ಪೇಜ್ ರಿಫ್ರೆಶ್ ಮಾಡುವ ಬದಲು ಅಥವಾ ಆ್ಯಪ್ ಅನ್-ಇನ್ಸ್ಟಾಲ್ ಮಾಡುವ ಬದಲು, ಸರ್ವರ್ ಸರಿ ಹೋಗುವವರೆಗೂ ಸ್ವಲ್ಪ ಸಮಯ ಕಾಯುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !