ಹೊಸದಿಗಂತ ವರದಿ ಕಾರವಾರ:
ಜಿಲ್ಲೆಯ ಕಾರವಾರ ಮತ್ತು ಭಟ್ಕಳ ತಹಸೀಲ್ದಾರರ ಕಚೇರಿಗಳನ್ನು ಸ್ಪೋಟಿಸುವುದಾಗಿ ಈ ಮೇಲ್ ಮೂಲಕ ಸಂದೇಶ ರವಾನಿಸಿರುವುದು ಕೆಲ ಕಾಲ ಆತಂಕದ ವಾತಾವರಣಕ್ಕೆ ಕಾರಣವಾಯಿತು.
ಮೊದಲು ಭಟ್ಕಳ ತಹಸೀಲ್ದಾರರ ಕಾರ್ಯಾಲಯದಲ್ಲಿ ಈ ಮೇಲ್ ಸಂದೇಶ ಗಮನಕ್ಕೆ ಬಂದಿದ್ದು ಮುಂಜಾನೆ 7.25 ಕ್ಕೆ ರವಾನೆಯಾದ ಈ ಮೇಲ್ ಸಂದೇಶವನ್ನು ಗೈನಾರಮೇಶ@ಔಟಲುಕ್ ಡಾಟ್.ಕಾಂ ಮೇಲ್ ಐಡಿ ಮೂಲಕ ಕಳುಹಿಸಲಾಗಿದೆ.
ತಮಿಳರು ಮತ್ತು ಪಾಕಿಸ್ತಾನಿಯರ ಸೇಡು ತಹಸೀಲ್ದಾರ ಕಚೇರಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ಆಗಲಿದೆ ಎಲ್ಲರನ್ನೂ ತಕ್ಷಣ ಕಚೇರಿಯಿಂದ ತೆರುವುಗೊಳಿಸಿ ಎಂಬ ತಲೆ ಬರಹದ ಅಡಿಯಲ್ಲಿ ರವಾನೆಯಾದ ಸಂದೇಶದಲ್ಲಿ ಡಿ.ಎಂ.ಕೆ ಸರ್ಕಾರ 2001ರಲ್ಲಿ ಪ್ರಶಾಂತ ಕಿಶೋರ್ ಮತ್ತು ಸುನೀಲ್ ಕುನಗೋಲು ಅವರ ಸೂಚನೆಯಂತೆ ಮಾಧ್ಯಮವನ್ನು ಬುಡಮೇಲು ಮಾಡುವ ಪ್ರಯತ್ನ ನಡೆಸಿತ್ತು ಇದು ಹತೋಟಿ ತಪ್ಪಿದಾಗ ಗೆಲಿಲಿಯೋ ಆಪ್ ಮೂಲಕ ರಾಧಾಕೃಷ್ಣನ್ ಐ.ಪಿ.ಎಸ್ ಹಾಗೂ ಜಾಫರ್ ಸೇಟ್ ಮೂಲಕ ಕನ್ನಡಿಗರ ಮೇಲೆ ಗೂಡಾಚಾರಿಕೆ ನಡೆಸಿದರು.
ಡಿ.ಎಂ.ಕೆ ಉದಯನಿಧಿ ಉದ್ದೇಶ ಹಣ ಗಳಿಸುವುದಕ್ಕಿಂತ ಹೆಚ್ಚಿನದ್ದೇ ಇದೆ ಅನಾಥಾಶ್ರಮಗಳ ಹೆಣ್ಣು ಮಕ್ಕಳನ್ನು ಮಾನಸಿಕ ಖಿನ್ನತೆಗೆ ಒಳಪಡಿಸಿ ಲೈಂಗಿಕ ಉದ್ದೇಶಕ್ಕೆ ಬಳಸಲಾಗುತ್ತದೆ. ಡಿ.ಎಂ.ಕೆ ನಾಯಕತ್ವಕ್ಕೆ ಈ ಕುರಿತು ಮಾಹಿತಿಯಿದೆ ಎಂದು ಉಲ್ಲೇಖಿಸಲಾಗಿದೆ. ಇದೇ ಸಂದೇಶವನ್ನು ಕಾರವಾರ ತಹಸೀಲ್ದಾರ ಕಚೇರಿಗೆ ಸಹ ಅದೇ ಐ.ಡಿಯಿಂದ ರವಾನೆ ಮಾಡಲಾಗಿದೆ. ಮೇಲ್ನೋಟಕ್ಕೆ ಹುಸಿ ಬೆದರಿಕೆಯ ಸಂದೇಶದಂತೆ ಕಂಡು ಬರುತ್ತಿರುವ
ಈ ಮೇಲ್ ಸಂದೇಶದ ಕುರಿತಂತೆ ಎರಡೂ ಕಡೆಗಳಲ್ಲಿ ಪೊಲೀಸ್ ದೂರು ನೀಡಲಾಗಿದ್ದು ಪ್ರಾಥಮಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೆಲವು ತಿಂಗಳುಗಳ ಹಿಂದೆ ಭಟ್ಕಳದ ಪೊಲೀಸ್ ಠಾಣೆ ಸ್ಪೋಟಿಸುವುದಾಗಿ ಈ ಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು ಮತ್ತು ಆ ಘಟನೆಗೆ ಸಂಬಂಧಿಸಿದಂತೆ ಈ ಮೇಲ್ ರವಾನೆಯಾದ ಮೊಬೈಲ್ ಬಳಕೆದಾರ ತಮಿಳುನಾಡಿನ ಕಣ್ಣನ್ ಮತ್ತು ಈ ಮೇಲ್ ಸಂದೇಶ ಕಳುಹಿಸಿದ ದೆಹಲಿ ಮೂಲದ ನಿತಿನ್ ಯಾನೆ ಖಾಲಿದ್ ಎನ್ನುವವರನ್ನು ಬಂಧಿಸಲಾಗಿತ್ತು.
ಬಂಧಿತ ನಿತಿನ್ ದೇಶದ ವಿವಿಧ ರಾಜ್ಯಗಳಲ್ಲಿ ಇದೇ ರೀತಿಯ ಕೃತ್ಯಗಳನ್ನು ನಡೆಸಿ ಸುಮಾರು 16 ಕಡೆಗಳಲ್ಲಿ ಪ್ರಕರಣಗಳು ದಾಖಲಾಗಿ ಜೈಲುವಾಸದಲ್ಲಿದ್ದಾನೆ. ಇದೀಗ ಮತ್ತೊಮ್ಮೆ ಜಿಲ್ಲೆಯ ಎರಡು ತಾಲೂಕು ಆಡಳಿತ ಕೇಂದ್ರಗಳಿಗೆ ಈ ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದ್ದು, ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಯೋಜನೆಗಳನ್ನೊಳಗೊಂಡ ಜಿಲ್ಲೆಯಲ್ಲಿ ಬಂದಿರುವ ಈ ಮೇಲ್ ಬೆದರಿಕೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸುವ ಅಗತ್ಯತೆ ಇದೆ, ಕೆಲವೇ ದಿನಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಕರಾವಳಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ
ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ಸಚಿವರ ಕಾರ್ಯಕ್ರಮಗಳು ನಿಗದಿಗೊಂಡಿದ್ದು ತಹಸೀಲ್ದಾರರ ಕಾರ್ಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ಪೊಲೀಸರಿಗೆ ಸವಾಲಾಗಿದೆ.
ಕಾರವಾರದ ತಹಸೀಲ್ದಾರರ ಕಚೇರಿ ಸ್ಫೋಟಿಸೋದಾಗಿ ಇ-ಮೇಲ್: ಆತಂಕದ ವಾತಾವರಣ

