ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಜನರು ತಮ್ಮ ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಜನರು ಇತರರಿಗೆ ತೊಂದರೆಯಾಗದಂತೆ ವರ್ತಿಸಬೇಕು. ಯಾವುದೇ ಕಾರಣಕ್ಕೂ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸುವಂತಿಲ್ಲ. ಅತಿ ವೇಗವಾಗಿ ಅಥವಾ ಅಜಾಗರೂಕತೆಯಿಂದ ಚಾಲನೆ ಮಾಡಬೇಡಿ. ನಿರ್ಬಂಧಿತ ಪ್ರದೇಶಗಳನ್ನು ಪ್ರವೇಶಿಸಬೇಡಿ. ಮೋಜಿಗಾಗಿ ತುರ್ತು ಕರೆಗಳಿಗೆ ಸಂಪರ್ಕಿಸಬಾರದು. ಅನವಶ್ಯಕವಾಗಿ ಗುಂಪುಗೂಡಬಾರದು ಎಂದು ಸೂಚನೆ ನೀಡಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿ, ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಡಿ.31ರ ಮಧ್ಯರಾತ್ರಿ 1 ಗಂಟೆಯವರೆಗೆ ಎಲ್ಲೆಡೆ ಹೊಸ ವರ್ಷಾಚರಣೆ ಆಚರಿಸಲು ಅನುಮತಿಯಿದೆ, ಡಿ.31ರ ರಾತ್ರಿ 11ರಿಂದ ಜನವರಿ 1ರ ಬೆಳಗ್ಗೆ 6ರವರೆಗೆ ಬೆಂಗಳೂರು ನಗರದ ಎಲ್ಲಾ ಮೇತುವೆಗಳಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಡಿಸೆಂಬರ್ 31 ರಂದು ರಾತ್ರಿ 10 ಗಂಟೆಯಿಂದ ಜನವರಿ 1 ರಂದು ಬೆಳಿಗ್ಗೆ 6 ಗಂಟೆಯವರೆಗೆ ವಿಮಾನ ನಿಲ್ದಾಣದ ಎಲಿವೇಟೆಡ್ ಎಕ್ಸ್ ಸ್ಟೇಯಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸ್ ಸಂಚಾರ ವಿಭಾಗದ ಜಂಟಿ ನಿರ್ದೇಶಕ ಎಂಎನ್ ಅನುಚೇತ್ ತಿಳಿಸಿದ್ದಾರೆ.