ಹೊಸದಿಗಂತ ಡಿಜಿಟಲ್ ಡೆಸ್ಕ್:
ಹನಿಟ್ರ್ಯಾಪ್ಗೆ ಸಿಲುಕಿ ಪಾಕ್ ಗುಪ್ತಚರಕ್ಕೆ ಮಾಹಿತಿ ರವಾನೆ ಮಾಡಿದ ಇಂಜಿನಿಯರ್‌ನ್ನು ಅರೆಸ್ಟ್ ಮಾಡಲಾಗಿದೆ. ಭಯೋತ್ಪಾದನಾ ನಿಗ್ರಹ ದಳ ಮಹಾರಾಷ್ಟ್ರ ಥಾಣೆಯ ಕಲ್ವಾದಲ್ಲಿ 27 ವರ್ಷದ ಎಂಜಿನಿಯರ್‌ನನ್ನು ಬಂಧಿಸಿದೆ. ಆರೋಪಿಯನ್ನು ರವಿ ಮುರಳೀಧರ್ ವರ್ಮಾ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಥಾಣೆಯ ನಾಗರಿಕ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಸೋಮವಾರದವರೆಗೆ ಎಟಿಎಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಸದ್ಯ ಭಯೋತ್ಪಾದನಾ ನಿಗ್ರಹ ದಳದಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ.
ಕಲ್ವಾ ಪ್ರದೇಶದ ಅತಿಕೋಣೇಶ್ವರ ನಗರದಲ್ಲಿ ವಾಸಿಸುವ ಆರೋಪಿ ವರ್ಮಾ, ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ನಕಲಿ ಹುಡುಗಿಯ ಖಾತೆಯಿಂದ ಹನಿಟ್ರ್ಯಾಪ್‌ನಲ್ಲಿ ಸಿಲುಕಿದ್ದ. ಇದಾದ ಬಳಿಕ, ಪಾಕಿಸ್ತಾನಿ ಏಜೆಂಟ್‌ನೊಂದಿಗೆ ಸಂಪರ್ಕ ಬೆಳೆಸಿದ್ದ ಎಂದು ತಿಳಿದುಬಂದಿದೆ. ಆರೋಪಿಯು ಥಾಣೆ ಸೇರಿದಂತೆ ಭಾರತದ ಪ್ರಮುಖ ನಗರ ಮುಂಬೈ ಪ್ರದೇಶದ ಬಗ್ಗೆ ಮಾಹಿತಿ ನೀಡುತ್ತಿದ್ದ. ಪಾಕಿಸ್ತಾನದ ಗುಪ್ತಚರ ಏಜೆಂಟರಿಗೆ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಮಾಹಿತಿ ಒದಗಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ, ಪಾಕಿಸ್ತಾನದ ಗುಪ್ತಚರ ಏಜೆಂಟರು ನಕಲಿ ಖಾತೆಗಳ ಮೂಲಕ ಅನೇಕ ಜನರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದರು. ಮುಂಬೈನ ಥಾಣೆಯಲ್ಲಿ ನೌಕಾಪಡೆ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಆರೋಪಿ ವರ್ಮಾ ನೀಡಿದ್ದು, ಪಾಕಿಸ್ತಾನಿ ಏಜೆಂಟರಿಂದ ಹಣ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.