ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್‌ನ ಅತ್ಯಂತ ರೋಚಕ ಸೆಮಿಫೈನಲ್ ಸಮರದಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್‌ಗಳಿಂದ ಮಣಿಸಿದ ಟೀಮ್ ಇಂಡಿಯಾ ಸಡಗರದಿಂದ ಫೈನಲ್ ಪ್ರವೇಶಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ಕುತೂಹಲ ಮನೆಮಾಡಿತ್ತು.
ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಮೊದಲು ಬೌಲಿಂಗ್ ಆಯ್ದುಕೊಂಡರು. ಆದರೆ ಭಾರತದ ಬ್ಯಾಟರ್‌ಗಳು ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅದರಲ್ಲೂ ಸಂಜು ಸ್ಯಾಮ್ಸನ್ ಕೇವಲ 42 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 89 ರನ್ ಸಿಡಿಸಿ ತಂಡದ ಮೊತ್ತವನ್ನು 253ಕ್ಕೆ ಕೊಂಡೊಯ್ದರು.
ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ಬಿರುಸಿನ ಬ್ಯಾಟಿಂಗ್ ನಡೆಸಿತು. ಒಂದು ಹಂತದಲ್ಲಿ ಇಂಗ್ಲೆಂಡ್ ಗೆಲ್ಲುವ ಮುನ್ಸೂಚನೆ ನೀಡಿತ್ತು. ಆದರೆ ಅಂತಿಮವಾಗಿ 20 ಓವರ್‌ಗಳಲ್ಲಿ 246 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಈ ಜಯದೊಂದಿಗೆ ಇಂಗ್ಲೆಂಡ್ ಟೂರ್ನಿಯಿಂದ ಹೊರಬಿದ್ದರೆ, ಭಾರತ ಫೈನಲ್ ಸೀಟು ಖಚಿತಪಡಿಸಿಕೊಂಡಿತು.
ಪಂದ್ಯದ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್ ಅವರಿಗೆ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಒಲಿಯಿತು. ಆದರೆ ಪ್ರಶಸ್ತಿ ಸ್ವೀಕರಿಸುವಾಗ ಸಂಜು ಆಡಿದ ಮಾತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. “ಈ ಪ್ರಶಸ್ತಿಗೆ ನನಗಿಂತ ಜಸ್‌ಪ್ರೀತ್ ಬುಮ್ರಾ ಹೆಚ್ಚು ಅರ್ಹರು” ಎನ್ನುವ ಮೂಲಕ ತಮ್ಮ ಅವಾರ್ಡ್ ಅನ್ನು ಬುಮ್ರಾಗೆ ಅರ್ಪಿಸಿದರು.
“ಬುಮ್ರಾ ಒಬ್ಬ ಅಪರೂಪದ ಬೌಲರ್. ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿದ್ದರೂ, ಅವರು 16ನೇ ಓವರ್‌ನಲ್ಲಿ 8 ರನ್ ಹಾಗೂ 18ನೇ ಓವರ್‌ನಲ್ಲಿ ಕೇವಲ 6 ರನ್ ನೀಡಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಅವರ ಆ ಸ್ಪೆಲ್ ಇಲ್ಲದಿದ್ದರೆ ನಾವು ಇಂದು ಗೆಲ್ಲುತ್ತಿರಲಿಲ್ಲ,” ಎಂದು ಸ್ಯಾಮ್ಸನ್ ಬುಮ್ರಾ ಅವರನ್ನು ಕೊಂಡಾಡಿದ್ದಾರೆ.



