ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಖಿಲ ಭಾರತೀಯ ಗ್ರಾಹಕ ಪಂಚಾಯತ್, ಕರ್ನಾಟಕ ಪ್ರಾಂತದ ಹದಿನೈದು ದಿನಗಳ ಗ್ರಾಹಕ ಜಾಗರಣ ಅಭಿಯಾನವು ಡಿಸೆಂಬರ್ 30ರಂದು ಸಮಾರೋಪಗೊಳ್ಳಲಿದೆ. ಈ ಪ್ರಯುಕ್ತ ಆ ದಿನ ಸಂಜೆ 4ಕ್ಕೆ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯ ಗಾಂಧಿ ಭವನದಲ್ಲಿ “ಪ್ರಬುದ್ಧ ಗ್ರಾಹಕ ಸಮಾವೇಶ” ಆಯೋಜಿಸಲಾಗಿದೆ.
ಮಾಜಿ ಲೋಕಾಯುಕ್ತರಾದಂತಹ ಸಂತೋಷ್ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ತುಮಕೂರಿನ ಸಿ.ಡಿ.ಆರ್.ಸಿ. ಅಧ್ಯಕ್ಷೆ ವಿಜಯಲಕ್ಷ್ಮಿ ಅವರು ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಬಗ್ಗೆ ವಿಷಯವನ್ನು ತಿಳಿಸಲಿದ್ದಾರೆ. “ಗ್ರಾಹಕರಲ್ಲಿ ಜಾಗೃತಿಯ ಅವಶ್ಯ ಹಾಗೂ ಭಾರತೀಯತೆಯಲ್ಲಿ ಗ್ರಾಹಕನ ಪಾತ್ರ” ಈ ವಿಷಯವಾಗಿ ಉಡುಪಿಯ ಡಿ.ಸಿ.ಸಿ ಸದಸ್ಯೆ ಈ. ಪ್ರೇಮ ಅವರು ಮಾತನಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ. ಸೋಮಶೇಖರ್ ಅವರು ನಿರ್ವಹಿಸಲಿದ್ದಾರೆ ಎಂದು ಸಂಘಟನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಗ್ರಾಹಕ ಜಾಗೃತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಇರಲಿವೆ.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್, ಕರ್ನಾಟಕ ಪ್ರಾಂತ ಕಳೆದ ಹಲವಾರು ವರ್ಷಗಳಿಂದ “ರಾಷ್ಟ್ರೀಯ ಗ್ರಾಹಕ ದಿನಾಚರಣೆ” (24th Dec) ಸಂದರ್ಭದಲ್ಲಿ ಗ್ರಾಹಕ ಜಾಗರಣ ಪಾಕ್ಷಿಕವನ್ನು ಡಿಸೆಂಬರ್ 15ರಿಂದ 30ರವರೆಗೆ 15 ದಿನಗಳ ಕಾಲ ನಡೆಸುತ್ತ ಬಂದಿದೆ. ಆನ್ಲೈನ್ನಲ್ಲಿಯೂ ಹಾಗೂ ಜಿಲ್ಲಾಮಟ್ಟಗಳಲ್ಲಿ ಗ್ರಾಹಕ ಪಂಚಾಯತಿನ ಕಾರ್ಯಕರ್ತರ ಮೂಲಕವೂ ಜಾಗೃತಿ ಅಭಿಯಾನ ನಡೆಯುತ್ತದೆ.