ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯಾರ್ಥಿಗಳ ದಾಖಲಾತಿ ಕುಸಿತ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ರಾಜ್ಯದ 15 ಕಾಲೇಜುಗಳಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗವನ್ನು ಮುಚ್ಚಲಾಗಿದೆ.
ಬೆಳಗಾವಿಯ ತಾಂತ್ರಿಕ ವಿಶ್ವವಿದ್ಯಾಲಯದ ಮಾಹಿತಿಯಂತೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ರಾಜ್ಯದ ನಾಲ್ಕು ಕಾಲೇಜುಗಳು ಸಿವಿಲ್ ಎಂಜಿನಿಯರಿಂಗ್ ವಿಭಾಗವನ್ನು ಮುಚ್ಚಿವೆ ಎನ್ನಲಾಗಿದ್ದು, ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ವಿದ್ಯಾರ್ಥಿಗಳ ಬೇಡಿಕೆ ಇರುವ ಕಾರಣ ಸಿವಿಲ್ ಇಂಜಿನಿಯರಿಂಗ್ ಸೀಟುಗಳನ್ನು ‘ಕಂಪ್ಯೂಟರ್ ಸೈನ್ಸ್’ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ವಿದ್ಯಾರ್ಥಿಗಳ ಕೊರತೆಯಿಂದಾಗಿ 2020-21ರಲ್ಲಿ ಮೊದಲ ಬಾರಿ ನಾಲ್ಕು ಕಾಲೇಜುಗಳು ಸಿವಿಲ್ ಎಂಜಿನಿಯರಿಂಗ್ ವಿಭಾಗವನ್ನು ಮುಚ್ಚಿದ್ದವು. ನಂತರವೂ ಅದೇ ಪ್ರವೃತ್ತಿ ಮುಂದುವರಿದು ಪ್ರತಿ ವರ್ಷವೂ ಮೂರ್‍ನಾಲ್ಕು ಕಾಲೇಜುಗಳಲ್ಲಿ ಕೋರ್ಸ್ ಸ್ಥಗಿತಗೊಳಿಸಲಾಗುತ್ತಿದೆ. ಕೆಲವು ಕಾಲೇಜುಗಳು ಸೀಟುಗಳ ಸಂಖ್ಯೆ ಕಡಿತಗೊಳಿಸಿವೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಮಾಹಿತಿ ನೀಡಿದರು.