ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಎಂದರೆ ಬೆಳಕಿನ ಹಬ್ಬ. ದೀಪ ಬೆಳಗುವುದಕ್ಕಿಂತ ಹೆಚ್ಚಾಗಿ ವಾಯು ಮಾಲಿನ್ಯ..ಶಬ್ದ ಮಾಲಿನ್ಯವೇ ಜೋರಾಗಿದೆ. ಇದರಿಂದಾಗಿ ಸಂಭ್ರಮದಿಂದ ಆಚರಿಸಬೇಕಾದ ಈ ಹಬ್ಬಕ್ಕೆ ನಿರ್ಬಂಧ ಹೇರಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನಾದರೂ ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗೋಣ.
ಮಾಲಿನ್ಯ ಮುಕ್ತ ದೀಪಾವಳಿಯ ಬಗ್ಗೆ ಭವಿಷ್ಯದ ಪೀಳಿಗೆಗೆ ತಿಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಾಗಾಗಿ ಮಕ್ಕಳಿಗೆ ಪಟಾಕಿ ಬಗ್ಗೆ ಒಲವು ತೋರದಂತೆ ಮನೆಯಲ್ಲಿಯೇ ಸಿಹಿ ಮಾಡಿ, ಮಣ್ಣಿನ ದೀಪಗಳ ಮೂಲಕ ಮನೆಯಂಗಳವನ್ನೆಲ್ಲಾ ಬೆಳಕಿನಿಂದ ತುಂಬಿಸಿ, ಹಾಡು-ಭಜನೆಗಳ ಮೂಲಕ ಹಬ್ಬಕ್ಕೆ ಕಳೆ ತುಂಬುವ ಕೆಲಸ ಮಾಡಬೇಕಿದೆ.
ಪರಿಸರ ದೀಪಗಳು
ಎಳ್ಳೆಣ್ಣೆ, ತೆಂಗಿನೆಣ್ಣೆ, ತುಪ್ಪ ಮುಂತಾದ ಯಾವುದೇ ಎಣ್ಣೆಯನ್ನು ಸುರಿದು ದೀಪಗಳನ್ನು ಬೆಳಗಿಸಿ. ಸುಂದರವಾಗಿ ಬೆಳಗುವ ದೀಪಗಳನ್ನು ನೋಡಿದಾಗ ನಮ್ಮ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಇದಲ್ಲದೆ, ಎಣ್ಣೆಯಿಂದ ದೀಪಗಳನ್ನು ಬೆಳಗಿಸುವುದು ಕಣ್ಣಿಗೆ ತುಂಬಾ ಒಳ್ಳೆಯದು.
ವಿದ್ಯುತ್ ದೀಪಗಳು, ಕೃತಕ ಪ್ಲಾಸ್ಟಿಕ್ ದೀಪಗಳು, ಯಾವುದೇ ವಿದ್ಯುತ್ ಬಲ್ಬ್ಗಳು, ಎಲ್ಇಡಿ ಬಲ್ಬ್ಗಳು ಮತ್ತು ಅಲಂಕಾರದ ಬಲ್ಬ್ಗಳ ಬೆಳಕು ಕಣ್ಣುಗಳಿಗೆ ಹಾನಿ ಮಾಡುತ್ತದೆ. ಇವುಗಳನ್ನು ದೂರವಿರಿಸಿ, ಮಣ್ಣಿನ ದೀಪಗಳಿಂದ ಮನೆಯನ್ನು ಬೆಳಗಿ.
ಸಾಧ್ಯವಾದರೆ, ಹಿಟ್ಟು ಹಾಗೂ ನಿಂಬೆಹಣ್ಣು ಬಳಸಿ ದೀಪ ಬೆಳಗಿಸಿ. ಗೋಧಿ ಹಿಟ್ಟು, ತೆಂಗಿನ ಚಿಪ್ಪು, ನಿಂಬೆಹಣ್ಣು, ಕಿತ್ತಳೆ ಸಿಪ್ಪೆಗಳಿಂದ ತಯಾರಿಸಿದ ದೀಪಗಳನ್ನು ಹಚ್ಚಿ ಪರಿಸರಕ್ಕೆ ಹಾನಿಯಾಗದಂತೆ ಮಾಡಿದರೆ ಸಂಭ್ರಮದ ಹಬ್ಬಕ್ಕೆ ನ್ಯಾಯ ಸಲ್ಲಿಸಿದಂತಾಗುತ್ತದೆ. ಇದರಿಂದ ವೆಚ್ಚವೂ ಸಾಕಷ್ಟು ಕಡಿಮೆಯಾಗುತ್ತದೆ ನೋಡುವವರಿಗೆ ವಿಶೇಷ..ಸುಂದರವಾಗಿ ಕಾಣುತ್ತದೆ.