ನೈತಿಕ ಪೊಲೀಸ್‌ಗಿರಿ ತಡೆಯಲು ಆಂಟಿ ಕಮ್ಯುನಲ್ ವಿಂಗ್ ಸ್ಥಾಪನೆ: ಸಚಿವ ಡಾ. ಜಿ.ಪರಮೇಶ್ವರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಂಗಳೂರು ಭಾಗದಲ್ಲಿ ಆಗಾಗ ಶಾಂತಿ ಸಾಮರಸ್ಯಕ್ಕೆ ಭಂಗ ಉಂಟು ಮಾಡುವ ‘ನೈತಿಕ ಪೊಲೀಸ್‌ಗಿರಿ’ನ್ನು ತಡೆಯಲು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ‘ಆಂಟಿ ಕಮ್ಯುನಲ್ ವಿಂಗ್’ನ್ನು (ಎಸಿಡಬ್ಲ್ಯು) ಸ್ಥಾಪಿಸಲಾಗುವುದು. ಈ ವಿಭಾಗವು ಜಾಗೃತಿ ಮತ್ತು ಕ್ರಮದ ಆಧಾರದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.

ಅವರು ಇಲ್ಲಿನ ಪಶ್ಚಿಮ ವಲಯ ಮತ್ತು ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಕಾನೂನು ಸುವ್ಯವಸ್ಥೆಯನ್ನು ಪರಾಮರ್ಶಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಹಿಂದೆ ನಾನು ಪ್ರಣಾಳಿಕೆ ಸಮಿತಿಯ ಅಧ್ಯಕ್ಷನಾಗಿ ಈ ಭಾಗದ ೨೫ಕ್ಕೂ ಅಕ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಆ ಸಂದರ್ಭದಲ್ಲಿ ಮಂಗಳೂರಿನಲ್ಲಿ ಆಗಾಗ ಶಾಂತಿ ಕದಡುವ ನೈತಿಕ ಪೊಲೀಸ್‌ಗಿರಿ ಬಗ್ಗೆ ಅವರು ಆತಂಕ ವ್ಯಕ್ತ ಪಡಿಸಿದ್ದರು. ಶಿಕ್ಷಣದಲ್ಲಿ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿರುವ ಮಂಗಳೂರು ಇಂತಹ ಶಾಂತಿ ಭಂಗ ಘಟನೆಗಳಿಂದಾಗಿ ಹೂಡಿಕೆಯ ವಿಷಯ ಬಂದಾಗ ಹಿನ್ನಡೆ ಅನುಭವಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದರು ಎಂದು ಸಚಿವರು ಹೇಳಿದರು.

‘ನೈತಿಕ ಪೊಲೀಸ್‌ಗಿರಿ’ಯನ್ನು ನಿಯಂತ್ರಿಸದೇ ಹೋದರೆ ಭವಿಷ್ಯದಲ್ಲಿ ತೊಡಕಾಗಲಿದೆ. ಮಂಗಳೂರು ಮತ್ತು ರಾಜ್ಯಕ್ಕೆ ಕೆಟ್ಟ ಹೆಸರು ಬರಿಲಿದೆ. ರಾಜ್ಯದ ದಕ್ಷ ಪೊಲೀಸ್ ವ್ಯವಸ್ಥೆಗೂ ಅಪಚಾರವಾಗಲಿದೆ. ಇವೆಲ್ಲವನ್ನು ಗಮನದಲ್ಲಿ ಇರಿಸಿಕೊಡು ಎಸಿಡಬ್ಲ್ಯು ವಿಭಾಗವನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದರು.

ಮಂಗಳೂರು ಪೊಲೀಸ್ ಆಯುಕ್ತರು ಲಭ್ಯ ಪೊಲೀಸ್ ಬಲದಿಂದಲೇ ಎಸಿಡಬ್ಲ್ಯುವನ್ನು ರಚಿಸಲಿದ್ದಾರೆ. ಅವರ ನೇರ ನಿಗಾವಣೆಯಲ್ಲಿ ವಿಭಾಗ ಕರ್ತವ್ಯ ನಿರ್ವಹಿಸಲಿದೆ. ಶಾಂತಿ-ಸಾಮರಸ್ಯ ಪುನ:ಸ್ಥಾಪನೆ ವಿಭಾಗದ ಪರಮ ಉದ್ದೇಶವಾಗಲಿದೆ. ವಿಭಾಗವು ಕಾನೂನು ರೀತ್ಯಾ ಕ್ರಮಗಳನ್ನು ಜಾರಿ ಮಾಡುವುದಲ್ಲದೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಿದೆ. ಅಗತ್ಯ ಎಂದು ಕಂಡು ಬಂದರೆ ರಾಜ್ಯ ಇತರ ಭಾಗಗಳಲ್ಲೂ ಇಂತಹ ವಿಭಾಗಗಳನ್ನು ತೆರೆಯಲಾಗುವುದು ಎಂದು ಗೃಹ ಸಚಿವರು ನುಡಿದರು.

ಆ.15 ಗಡುವು
ಮಂಗಳೂರು ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಡ್ರಗ್ಸ್ ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ದೂರುಗಳಿವೆ. ಮುಂದಿನ ಆ.15ರ ಒಳಗಾಗಿ ಡ್ರಗ್ಸ್ ಸಾಗಾಟದಾರರು ಮತ್ತು ಗ್ರಾಹಕ ಜಾಲವನ್ನು ಹತ್ತಿಕ್ಕುವ ಕೆಲಸವನ್ನು ಪೊಲೀಸರು ಮಾಡುವಂತೆ ಕಟುನಿಟ್ಟಿನ ಆದೇಶ ನೀಡಲಾಗಿದೆ. ಅಧಿಕಾರಿಗಳು ಆದೇಶವನ್ನು ಖಚಿತವಾಗಿ ಪಾಲಿಸುವ ಭರವಸೆ ಇದೆ ಎಂದು ಡಾ. ಜಿ.ಪರಮೇಶ್ವರ ಹೇಳಿದರು.

ವಿದ್ಯಾರ್ಥಿಗಳು ಮತ್ತು ಯುವ ಜನತೆಗೆ ಡ್ರಗ್ಸ್ ದಂಧೆ ಮಾರಕವಾಗಿದೆ. ವಿಧ್ಯಾರ್ಥಿಗಳ ಭವಿಷ್ಯದ ಮೇಲೆ ಮಾಧಕ ವಸ್ತುಗಳು ಚೆಲ್ಲಾಟ ಆಡುತ್ತವೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಡ್ರಗ್ಸ್ ಜಾಲದ ಬಗ್ಗೆ ಎಚ್ಚರ ವಹಿಸಬೇಕು. ಕಾನೂನು ಬಾಹಿರ ಚಟುವಟಿಕೆಗಳನ್ನು ಹೊಡೆದೋಡಿಸಲು ಪೊಲೀಸ್ ಇಲಾಖೆಯ ಜೊತೆಯಲ್ಲಿ ಕೈಜೋಡಿಸ ಬೇಕು ಎಂದು ಸಚಿವರು ಮನವಿ ಮಾಡಿದರು.

ಕಾನೂನು ಕೈಗೆತ್ತಿಕೊಳ್ಳುವ, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವ ವ್ಯಕ್ತಿಗಳು ಎಷ್ಟೇ ದೊಡ್ಡವರು, ಪ್ರಭಾವಿಗಳೇ ಆಗಿದ್ದರೂ ಇಲಾಖೆ ಅಂತಹವರ ಮೇಲೆ ಯಾವುದೇ ರಿಯಾಯಿತಿ ತೋರಿಸದು. ಕಠಿಣ ಕ್ರಮಗಳೊಂದಿಗೆ ಅಂತಹ ವ್ಯಕ್ತಿಗಳಿಗೆ ಸಮರ್ಥವಾಗಿ ಉತ್ತರಿಸಲು ಕರ್ನಾಟಕ ಪೊಲೀಸ್ ಸಮರ್ಥವಾಗಿದೆ ಎಂದು ಗೃಹಮಂತ್ರಿಗಳು ನುಡಿದರು.

ಪರಿಹಾರಕ್ಕೆ ಶಿಫಾರಸು
ದಕ್ಷಿಣ ಕನ್ನಡದಲ್ಲಿ ಹಿಂದೆ ನಡೆದ ಆರೇಳು ಕೊಲೆ ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಪರಿಹಾರ ದೊರೆತಿಲ್ಲ ಎಂಬ ಮಾಹಿತಿ ಲಭಿಸಿದೆ. ದೀಪಕ್ ರಾವ್, ಮಸೂದ್, ಫೈಝಲ್ ಹಾಗೂ ಜಲೀಲ್ ಮೊದಲಾದ ಕುಟುಂಬಗಳಿಗೆ ಪರಿಹಾರ ನೀಡಲು ಸರಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲು ಕ್ರಮ ವಹಿಸಲಾಗಿದೆ ಎಂದು ಡಾ.ಪರಮೇಶ್ವರ ತಿಳಿಸಿದರು.

ಕೆಲವೊಂದು ಕೊಲೆ ಪ್ರಕರಣಗಳ ಮರು ತನಿಖೆ ನಡೆಸುವಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಕರಣಗಳು ನ್ಯಾಯಾಲಯಲ್ಲಿ ಇರುವಾಗ ಅವುಗಳ ಕುರಿತಾಗಿ ಪ್ರತಿಕ್ರಿಯಿಸುವುದು ಸೂಕ್ತ ಅಲ್ಲ ಎಂದರು.

ಎಡಿಜಿಪಿ ಅಲೋಕ್‌ಕುಮಾರ್, ಪಶ್ಚಿಮ ವಲಯ ಉಪ ಪೊಲೀಸ್ ಮಹಾ ನಿರೀಕ್ಷಕ ಡಾ.ಚಂದ್ರಗುಪ್ತ, ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್‌ಕುಮಾರ್ ಜೈನ್ ಮೊದಲಾದ ಹಿರಿಯ ಅಕಾರಿಗಳು ಉಪಸ್ಥಿತರಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!