ಮುಂದಿನ ದಿನಗಳಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ: ಯುಕೊ ವಿಶ್ವಾಸ

ಹೊಸದಿಗಂತ ವರದಿ, ಶ್ರೀಮಂಗಲ:

ಕೊಡವ ಜನಾಂಗದ ಅಭಿವೃದ್ದಿಗಾಗಿ ಇದೀಗ ಬಜೆಟ್’ನಲ್ಲಿ ಅನುದಾನ ಘೋಷಣೆ ಮಾಡಿರುವುದು ನಮ್ಮ ಬೇಡಿಕೆಗೆ ಸಿಕ್ಕ ಮೊದಲ ಯಶಸ್ಸು. ಇದನ್ನು ಸ್ವಾಗತಿಸುವುದಾಗಿ ತಿಳಿಸಿದ ಯುನೈಟೆಡ್ ಕೊಡವ ಆರ್ಗನೈಝೇಷನ್ (ಯುಕೊ) ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಬೇಡಿಕೆಯಂತೆ ಕೊಡವ ಜನಾಂಗ ಅಭಿವೃದ್ದಿ ನಿಗಮ ಸ್ಥಾಪನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಪೊನ್ನಂಪೇಟೆಯಲ್ಲಿ ನಡೆದ ಚಿಂತನಾ ಸಭೆಯ ನಂತರ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕೊಡವ ಅಭಿವೃದ್ದಿ ನಿಗಮ ಸ್ಥಾಪನೆಯಾಗಬೇಕೆಂಬುದು ನಮ್ಮ ಅಚಲ ಬೇಡಿಕೆಯಾಗಿದೆ. ಈ ಬೇಡಿಕೆಯನ್ನು ವ್ಯವಸ್ಥಿತವಾಗಿ ಸರ್ಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ನಾವು ಪಾರದರ್ಶಕವಾಗಿ ಪ್ರಯತ್ನಿಸಿದ್ದೇವೆ. ಕೊಡಗಿನ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್‍ ಅವರ ಮೂಲಕ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬೃಹತ್ ನಿಯೋಗದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಖುದ್ದಾಗಿ ಭೇಟಿ ಮಾಡಿ ಬೇಡಿಕೆಯ ಕುರಿತು ಮನವರಿಕೆ ಮಾಡಲಾಗಿತ್ತು. ಪ್ರತ್ಯೇಕವಾಗಿ ಸಂಸದ ಪ್ರತಾಪ ಸಿಂಹ ಅವರು ಸಹ ಖುದ್ದಾಗಿ ಮುಖ್ಯಮಂತ್ರಿಗಳನ್ನು ಕಂಡು ಈ ಕುರಿತು ಮನವಿ ಮಾಡಿದ್ದರು. ನಮ್ಮ ಶಾಸಕರೂ ಹಲವು ಬಾರಿ ಪತ್ರದ ಮೂಲಕ ಕೊಡವ ಅಭಿವೃದ್ದಿ ನಿಗಮಕ್ಕಾಗಿ ಮನವಿ ಮಾಡಿಕೊಂಡಿದ್ದರು. ನಂತರದಲ್ಲಿ ಯುಕೊ ಪ್ರಮುಖರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ ಅವರನ್ನು ಭೇಟಿ ಮಾಡಿ ಅವರ ಮುಖಾಂತರವೂ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಲಾಗಿತ್ತು. ಇದೆಲ್ಲದರ ಫಲವಾಗಿ ಇದೀಗ ಮುಖ್ಯಮಂತ್ರಿಗಳು 10 ಕೋಟಿ ರೂ.ಗಳ ಅನುದಾನವನ್ನು ಪ್ರಸಕ್ತ ಬಜೆಟ್‍ನಲ್ಲಿ ಕೊಡವ ಜನಾಂಗದ ಅಭಿವೃದ್ದಿಗಾಗಿ ನೀಡಿದ್ದಾರೆ. ಇದಕ್ಕಾಗಿ ಮುಖ್ಮಂತ್ರಿಗಳಿಗೆ ಹಾಗೂ ನಮಗೆ ಪೂರಕವಾಗಿ ಸ್ಪಂದಿಸಿದ ಶಾಸಕರುಗಳು ಮತ್ತು ಸಂಸದರಿಗೆ ಆಭಾರಿಯಾಗಿದ್ದೇವೆ ಎಂದು ಮಂಜು ಚಿಣ್ಣಪ್ಪ ಹೇಳಿದರು.
ಉದ್ದೇಶ ಈಡೇರುವುದಿಲ್ಲ: ಕೊಡವ ಅಭಿವೃದ್ದಿ ನಿಗಮ ಸ್ಥಾಪನೆಯಾಗದೆ ಉದ್ದೇಶ ಈಡೇರುವುದಿಲ್ಲ ಎಂದು ತಿಳಿಸಿದ ಅವರು, ಕೊಡವ ಅಭಿವೃದ್ದಿ ಸ್ಥಾಪನೆಯ ನಿಟ್ಟಿನಲ್ಲಿ ಗುರಿ ಮುಟ್ಟುವವರೆಗೆ ನಮ್ಮ ಪ್ರಯತ್ನ ಮುಂದುವರಿಯಲಿದೆ. ಕೇವಲ ಒಂದು ಬಜೆಟ್‍ನಲ್ಲಿ ಅನುದಾನ ನೀಡುವುದರಿಂದ ಕೊಡವ ಜನಾಂಗದ ಸಮಗ್ರ ಅಭಿವೃದ್ಧಿ ಸಾದ್ಯವಿಲ್ಲ. ಕೊಡವರ ಸಮಗ್ರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪಾರಂಪರಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ಸರ್ಕಾರವು ಶಾಸನ ಬದ್ಧವಾಗಿ ಸಾಂಸ್ಥಿಕ ಅಸ್ತಿತ್ವವನ್ನು ಸ್ಥಾಪಿಸುವ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದು ಮಂಜು ಚಿಣ್ಣಪ್ಪ ನುಡಿದರು.
ಈಗಾಗಲೇ ಸಂಸದರು ಹಾಗೂ ಶಾಸಕರು ಈ ಕುರಿತಂತೆ ತನ್ನೊಂದಿಗೆ ಮಾತನಾಡಿದ್ದು, ತಾಂತ್ರಿಕ ಕಾರಣಗಳಿಂದಾಗಿ ಬಜೆಟ್’ನಲ್ಲಿ ಅಭಿವೃದ್ದಿ ನಿಗಮ ಘೋಷಣೆ ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಖಂಡಿತವಾಗಿ ಕೊಡವ ಅಭಿವೃದ್ದಿ ನಿಗಮ ಘೋಷಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ ಅವರು, ಶಾಸಕರು ಹಾಗೂ ಸಂಸದರು ನಮ್ಮ ಬೇಡಿಕೆ ಈಡೇರುವವರಗೆ ತಮಗೆ ಸ್ಪಂದಿಸುವ ಭರವಸೆ ನೀಡಿರುವುದಾಗಿ ಮಂಜು ಚಿಣ್ಣಪ್ಪ ವಿವರಿಸಿದರು.
ಇದುವರೆಗೆ ಕೊಡವ ಅಭಿವೃದ್ದಿ ನಿಗಮ ಕುರಿತ ಯುಕೊ ಬೇಡಿಕೆಗೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಮತ್ತು ಸಂಸದ ಪ್ರತಾಪ ಸಿಂಹ ಪ್ರಾಮಾಣಿಕವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿಯೂ ಬೆಂಬಲ ನೀಡುವ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಹುರುಳಿಲ್ಲ: ಕೊಡವ ಅಭಿವೃದ್ದಿ ನಿಗಮ ಬೇಡಿಕೆಯಿಂದ ಕೊಡವರ ಎಸ್ಟಿ ಸ್ಥಾನಮಾನದ ಹೋರಾಟಕ್ಕೆ ಹಿನ್ನಡೆಯಾಗಲಿದೆಯೆಂಬ ವಾದವಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮಂಜು ಚಿಣ್ಣಪ್ಪ, ಈ ವಾದದಲ್ಲಿ ಯಾವುದೇ ಹುರುಳಿಲ್ಲ, ಯಾವುದೇ ಬೇಡಿಕೆಗಳು ಈಡೇರಬೇಕಾದಲ್ಲಿ ಸರ್ಕಾರದ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೂರಕವಾದ ದಾಖಲಾತಿಯೊಂದಿಗೆ ವ್ಯವಸ್ಥಿತವಾಗಿ ವ್ಯವಹರಿಸಿ, ನಿಖರವಾದ ಹಾಗೂ ಸೂಕ್ತ ತಂತ್ರಗಾರಿಕೆಯಿಂದ ಸಂಬಂಧಪಟ್ಟವರ ಮೂಲಕ ಪ್ರಯತ್ನಿಸಿದರೆ ಯಾವುದೇ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಸಾದ್ಯವಾಗುತ್ತದೆ. ವಿತಂಡ ವಾದದ ಮೂಲಕ, ಬಾಲಿಷ ಹೇಳಿಕೆಗಳ ಮೂಲಕ ಸಮಯ ಸಾಧಕತನ ಪ್ರದರ್ಶಿಸುವವರಿಂದ ಕೊಡವ ಅಭಿವೃದ್ದಿ ನಿಗಮಕ್ಕೆ ವಿರೋಧ ವ್ಯಕ್ತವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಕೊಡವ ಅಭಿವೃದ್ದಿ ನಿಗಮಕ್ಕೆ ಪರೋಕ್ಷವಾಗಿ ಸಮಸ್ತ ಕೊಡಗಿನ ಜನತೆ ಸಹಕಾರ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಕೊಡವ ಅಭಿವೃದ್ದಿ ನಿಗಮ ಸ್ಥಾಪನೆಯಾಗುವುದು ನಿಶ್ಚಿತ ಎಂದು ಪುನರುಚ್ಚರಿಸಿದರು.
ಈ ಸಂದರ್ಭ ವಕೀಲ ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಅಪ್ಪಾರಂಡ ವೇಣು ಪೊನ್ನಪ್ಪ, ಮಾದೇಟಿರ ತಿಮ್ಮಯ್ಯ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!