Wednesday, September 24, 2025

ಅಕ್ರಮ ವಲಸೆಯಿಂದ ಯುರೋಪ್‌ ನರಕವಾಗುತ್ತಿದೆ: ವಿಶ್ವಸಂಸ್ಥೆಯ ವಿರುದ್ಧ ಗುಡುಗಿದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆ (UNGA) ವೇದಿಕೆಯಲ್ಲಿ ತೀವ್ರ ಟೀಕೆ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ. ಅಕ್ರಮ ವಲಸೆ ಮತ್ತು ಹವಾಮಾನ ಬದಲಾವಣೆಯ ವಿಚಾರದಲ್ಲಿ ಟ್ರಂಪ್‌ ಅವರ ನೇರ ಆರೋಪಗಳು ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.

ತಮ್ಮ ಭಾಷಣದಲ್ಲಿ ವಿಶ್ವಸಂಸ್ಥೆಯನ್ನು ಟೀಕಿಸಿದ ಟ್ರಂಪ್‌, “ನೀವೆಲ್ಲರೂ ಸೇರಿ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ನರಕ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು. “ಯುರೋಪ್‌ ಅಕ್ರಮ ವಲಸೆಯಿಂದ ನರಕವಾಗುತ್ತಿದೆ. ಆದರೆ ವಿಶ್ವಸಂಸ್ಥೆ ಅದನ್ನು ತಡೆಯುವ ಬದಲು ಪ್ರೋತ್ಸಾಹಿಸುತ್ತಿದೆ” ಎಂದು ಅವರು ಟೀಕಿಸಿದರು.

ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟಲು ನಡೆಯುತ್ತಿರುವ ಪ್ರಯತ್ನಗಳನ್ನು “ಜಗತ್ತಿನ ದೊಡ್ಡ ವಂಚನೆಯ ಭಾಗ” ಎಂದು ಕರೆಯುವ ಮೂಲಕ ಟ್ರಂಪ್‌ ವಿವಾದ ಸೃಷ್ಟಿಸಿದರು. ಹವಾಮಾನ ಬದಲಾವಣೆಯಲ್ಲಿ ವಿಶ್ವಸಂಸ್ಥೆಯ ಪಾತ್ರವನ್ನು ಅಮೆರಿಕ ಅಧ್ಯಕ್ಷರು ಟೀಕಿಸಿದರು.

ವಿಶ್ವಸಂಸ್ಥೆಯ ವಿರುದ್ಧ ವೈಯಕ್ತಿಕ ಅಸಮಾಧಾನ
ವಿಶ್ವಸಂಸ್ಥೆಯಿಂದ ನನಗೆ ಸಿಕ್ಕಿದ್ದು ಕೆಟ್ಟ ಎಸ್ಕಲೇಟರ್ ಮತ್ತು ಕೆಟ್ಟ ಟೆಲಿಪ್ರೊಂಪ್ಟರ್‌ ಮಾತ್ರ” ಎಂದು ವ್ಯಂಗ್ಯವಾಡಿದ ಟ್ರಂಪ್‌, ಅಮೆರಿಕದ ಹಿತಾಸಕ್ತಿಗಳನ್ನು ಹಾನಿಗೊಳಿಸುವ ನಿರ್ಧಾರಗಳನ್ನು ವಿಶ್ವಸಂಸ್ಥೆ ಕೈಗೊಳ್ಳುತ್ತಿದೆ ಎಂದು ದೂರಿದರು.

ಪ್ಯಾಲೆಸ್ಟೈನ್‌ ರಾಷ್ಟ್ರಕ್ಕೆ ಮಾನ್ಯತೆ ನೀಡುತ್ತಿರುವ ದೇಶಗಳನ್ನು ಟ್ರಂಪ್‌ ತರಾಟೆಗೆ ತೆಗೆದುಕೊಂಡರು. ಜೊತೆಗೆ, ರಷ್ಯಾ ವಿರುದ್ಧ ತೀವ್ರ ಕ್ರಮ ಕೈಗೊಳ್ಳದೇ, ಭಾರತ ಮತ್ತು ಚೀನಾದ ಮೇಲೆ ಮಾತ್ರ ಸುಂಕ ವಿಧಿಸಲು ಯುರೋಪ್‌ ಮುಂದಾಗುತ್ತಿರುವುದನ್ನು ಅವರು ವಿರೋಧಿಸಿದರು.

ಇದನ್ನೂ ಓದಿ