ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೆಂದೂ ಕಾಣದ ಶಾಖದಲೆಗಳ ಹೊಡೆತಕ್ಕೆ ಸಿಲುಕಿ ಯುರೋಪ್ ತಲ್ಲಣಿಸುತ್ತಿದೆ. ತಾಪಮಾನದಲ್ಲಿನ ಗಣನೀಯ ಏರಿಕೆಯು ಖಂಡದ ವಿವಿಧೆಡೆ ಕಾಡ್ಗಿಚ್ಚಿಗೆ ಕಾರಣವಾಗಿದ್ದು ಬಿಸಿಯೇರಿಕೆ ಇನ್ನೂ ಹೆಚ್ಚುತ್ತಿದೆ. ಯುನೈಟೆಡ್ ಕಿಂಗ್‌ಡಮ್(ಇಂಗ್ಲೆಂಡ್)ನಲ್ಲಿ ಇದೇ ಮೊದಲಬಾರಿಗೆ ಅತಿ ಹೆಚ್ಚಿನ ತಾಪಮಾನ ದಾಖಲಾಗಿದೆ.
ಲಂಡನ್ ನ ಹೀಥ್ರೂನಲ್ಲಿ ಇದೇ ಮೊದಲಬಾರಿಗೆ 40.2ಡಿಗ್ರಿ ಸೆಲ್ಸಿಯಸ್ (104ಡಿಗ್ರಿ ಫ್ಯಾರನ್ ಹೀಟ್) ಗೆ ತಲುಪಿದೆ. ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳಲ್ಲಿ ಸನ್ ಸ್ಟ್ರೋಕ್ ಹಾಗೂ ಶಾಖದಲೆಗಳ ಹೊಡೆತಕ್ಕೆ ಸಿಲುಕಿ 1,700 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಾಡ್ಗಿಚ್ಚಿನಿಂದಾಗಿ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ.
ಸ್ಪೇನ್‌ನ ಕಾರ್ಲೋಸ್ III ಇನ್‌ಸ್ಟಿಟ್ಯೂಟ್ ಪ್ರಕಾರ ದೇಶದಲ್ಲಿ ಜುಲೈ 10 ರಿಂದ ಜುಲೈ 17 ರವರೆಗೆ 678 ಶಾಖ-ಸಂಬಂಧಿತ ಸಾವುಗಳು ಸಂಭವಿಸಿವೆ. ಇನ್ನೊಂದೆಡೆ ಪೋರ್ಚುಗಲ್ ನಲ್ಲಿಯೂ ಅನೇಕ ಸಾವುಗಳು ವರದಿಯಾಗಿದ್ದು ಜುಲೈ 7 ಮತ್ತು ಜುಲೈ 18 ರ ನಡುವೆ 1,063 ಶಾಖ-ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ಪೋರ್ಚುಗಲ್ ಆರೋಗ್ಯ ಮಹಾ ನಿರ್ದೇಶಕರು ತಿಳಿಸಿದ್ದಾರೆ. ಇನ್ನೂ ಕೆಲ ವಾರಗಳ ಕಾಲ ಇದು ಮುಂದುವರೆಯುತ್ತವೆ ಎನ್ನಲಾಗಿದೆ.