ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ಇನ್ನು ಹತ್ತು ವರ್ಷ ಕಳೆದರೂ ಕರ್ನಾಟಕದಲ್ಲಿ ನಂದಿನಿ ಬ್ರ್ಯಾಂಡ್‌ಗೆ ಸ್ಪರ್ಧೆ ನೀಡಲು ಆಗದು. ನಂದಿನಿ ಉತ್ಪನ್ನಗಳು ಹಾಗೂ ಅಮುಲ್ ಉತ್ಪನ್ನಗಳ ಬೆಲೆಯಲ್ಲಿ ಬಹಳ ವ್ಯತ್ಯಾಸವಿದೆನಾವು ನಂದಿನಿಗೆ ಸ್ಪರ್ಧೆ ನೀಡಲು ಕರ್ನಾಟಕಕ್ಕೆ ಬರುತ್ತಿಲ್ಲ, ಬದಲಿಗೆ ನಂದಿನಿಯ ಜೊತೆ ಇರಲು ಬರುತ್ತಿದ್ದೇವೆ ಎಂದು ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯೇನ್ ಮೆಹ್ತಾ ಪ್ರತಿಕ್ರಿಯೆ ನೀಡಿದ್ದಾರೆ.
‘ಅಮುಲ್ ವರ್ಸಸ್ ನಂದಿನಿ’(Amul Vs Nandini) ವಿವಾದ ಇಂದು ಕರ್ನಾಟಕದಲ್ಲಿ ಜೋರಾಗುತ್ತಿದ್ದು, ಇದರ ನಡುವೆ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯೇನ್ ಮೆಹ್ತಾ(Jayen Mehta) ಸ್ಪಷ್ಟನೆ ನೀಡಿದ್ದಾರೆ.
ಇದು ಅಮುಲ್ ವರ್ಸಸ್ ನಂದಿನಿ ವಿಚಾರ ಅಲ್ಲ, ಬದಲಿಗೆ ಇದು ಅಮುಲ್ ಮತ್ತು ನಂದಿನಿಗೆ ಸಂಬಂಧಿಸಿದ ವಿಚಾರ. ನಾವಿಬ್ಬರೂ ರೈತರ ಮಾಲಿಕತ್ವದ ಸಹಕಾರ ಸಂಸ್ಥೆಗಳು. ಇಬ್ಬರೂ ಸಮಾನ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ನಾವು ಕರ್ನಾಟಕಕ್ಕೆ ನಂದಿನಿಯ ಜೊತೆ ಸ್ಪರ್ಧಿಸಲು ಬರುತ್ತಿಲ್ಲ, ಬದಲಿಗೆ ನಂದಿನಿಯ ಜೊತೆ ಇರಲು ಬರುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಈಗಾಗಲೇ ಬೇರೆ ಬೇರೆ ರೀತಿಯಲ್ಲಿ ನಾವು ನಂದಿನಿಯ ಜೊತೆ ಬಹಳ ಹತ್ತಿರದಿಂದ ಕೆಲಸ ಮಾಡುತ್ತಿದ್ದೇವೆ. ಕಳೆದೊಂದು ದಶಕದಿಂದ ಬೆಂಗಳೂರಿನಲ್ಲಿರುವ ಮದರ್ ಡೈರಿ ಘಟಕದಲ್ಲಿ ನಂದಿನಿ ಹಾಲು ಬಳಸಿಕೊಂಡು ಅಮುಲ್ ಐಸ್‌ಕ್ರೀಂ ತಯಾರಿಸುತ್ತಿದ್ದೇವೆ. ನಮಗೆ ಚೀಸ್‌ನ ಕೊರತೆಯುಂಟಾದಾಗ ನಂದಿನಿಯಿಂದ ಚೀಸ್ ಖರೀದಿಸಿದ್ದೇವೆ. ಈಗ ಎದ್ದಿರುವ ವಿವಾದದಿಂದ ನಂದಿನಿಯ ಜೊತೆ ನಮಗಿರುವ ಸ್ನೇಹಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಜಯೇನ್ ತಿಳಿಸಿದ್ದಾರೆ.
ನಾವು ಕರ್ನಾಟಕಕ್ಕೆ ಈಗ ಕಾಲಿಡುತ್ತಿಲ್ಲ. ಕಳೆದ ಏಳೆಂಟು ವರ್ಷಗಳಿಂದ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ನಾವು ಅಮುಲ್ ಹಾಲು ಮತ್ತು ಮೊಸರಿನ ಪ್ಯಾಕೆಟ್ ಮಾರುತ್ತಿದ್ದೇವೆ. ಈಗಲೂ ನಾವು ಬೆಂಗಳೂರಿನಲ್ಲಿ ಹಾಲು ಮತ್ತು ಮೊಸರನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಿಲ್ಲ. ಕೇವಲ ಇ-ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಮಾತ್ರ ಹಾಲು, ಮೊಸರು ಮಾರಾಟ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಾವು ಹಾಲು ಮತ್ತು ಮೊಸರಿನ ಮಾರಾಟಕ್ಕಿಳಿಯಲು ಪ್ರಮುಖ ಕಾರಣವೇ ಗ್ರಾಹಕರು. ಇಲ್ಲಿ ಗ್ರಾಹಕರು ಇ-ಕಾಮರ್ಸ್ ವೇದಿಕೆಗಳಲ್ಲಿ ಅಮುಲ್ ಡೈರಿ ಉತ್ಪನ್ನಗಳಿಗೆ ಸರ್ಚ್ ಮಾಡುತ್ತಿರುವ ಕಾರಣ ಇಲ್ಲಿಗೆ ಬಂದಿದ್ದೇವೆ. ನಮಗೆ ಬೆಂಗಳೂರಿನಲ್ಲಿ ಘಟಕವಿಲ್ಲದ ಕಾರಣ ಹತ್ತಿರದ ಘಟಕವಾದ ಆಂಧ್ರಪ್ರದೇಶದ ಮದನಪಲ್ಲಿ ಘಟಕದಿಂದ ಹಾಲು ಮತ್ತು ಮೊಸರು ತಂದು ಮಾರಾಟ ಮಾಡುತ್ತೇವೆ ಎಂದೂ ಜಯೇನ್ ಮೆಹ್ತಾ ಹೇಳಿದ್ದಾರೆ.