ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜಗಬೋರನಹಳ್ಳಿ ಗ್ರಾಮದಲ್ಲಿ ಮದವೇರಿದ ಎರಡು ಕಾಡಾನೆಗಳ ನಡುವೆ ನಡೆದಿದ್ದ ಭೀಕರ ಕಾಳಗದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಸದ್ದು ಮಾಡುತ್ತಿದೆ.
ಕಳೆದ ನವೆಂಬರ್ 9 ರಂದು, ಭೀಮಾ ಮತ್ತು ಕ್ಯಾಪ್ಟನ್ ಎಂದು ಕರೆಯಲ್ಪಡುವ ಈ ಎರಡು ಮದಗಜಗಳು ಪರಸ್ಪರ ಎದುರುಬಿದ್ದು ದೀರ್ಘಕಾಲದವರೆಗೆ ಬಿಗ್ ಫೈಟ್ ನಡೆಸಿದ್ದವು. ಮದದಿಂದ ಕೆರಳಿದ್ದ ಈ ಎರಡೂ ಸಲಗಗಳು ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಸಂಚರಿಸಿ ಸ್ಥಳೀಯರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದ್ದವು.
ಪರಸ್ಪರ ಎದುರಾದಾಗ, ಎರಡು ಆನೆಗಳು ಭಯಾನಕ ಶಬ್ದಗಳನ್ನು ಮಾಡುತ್ತಾ ದೀರ್ಘ ಸಮಯದವರೆಗೆ ಹೋರಾಡಿದವು. ಈ ಭೀಕರ ಕಾಳಗದಲ್ಲಿ ಅಂತಿಮವಾಗಿ ಕ್ಯಾಪ್ಟನ್ ಎದುರು ಸೋಲೊಪ್ಪಿಕೊಂಡ ಭೀಮಾ, ತನ್ನ ಒಂದು ದಂತವನ್ನೇ ಕಳೆದುಕೊಂಡು ಗಾಯಾಳಾಗಿತ್ತು.
ಘಟನೆಯ ಬಳಿಕ ಭೀಮಾ ಆನೆಯ ಆರೋಗ್ಯದ ಕುರಿತು ಆತಂಕ ಎದುರಾಗಿತ್ತು. ಆದರೆ, ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಗಾಯಾಳಾಗಿದ್ದ ಭೀಮಾ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮತ್ತೆ ಕಾಡಿನಲ್ಲಿ ಸಾಮಾನ್ಯವಾಗಿ ಸಂಚರಿಸುತ್ತಿರುವುದು ವರದಿಯಾಗಿದೆ. ಈ ಕಾಳಗದ ವಿಡಿಯೋ ಇದೀಗ ಆತಂಕ ಮತ್ತು ಕುತೂಹಲದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

