ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷ ರಾಜ್ಯದಾದ್ಯಂತ ತನ್ನ ಬಲ ವೃದ್ಧಿಸಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಂಘಟನಾ ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ನೋಂದಣಿ ಎಂಬ ಹೊಸ ಕಾರ್ಯಕ್ರಮ ಆರಂಭಿಸಿದ್ದು, ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕ ಸುರೇಶ್ ಬಾಬು ಹಾಗೂ ಅನೇಕ ಶಾಸಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ದೇವೇಗೌಡರು ಮಾತನಾಡುತ್ತಾ, ಜೆಡಿಎಸ್ ಮುಕ್ತಾಯವಾಗಿದೆ ಎಂಬವರು ತಪ್ಪು ಊಹೆ ಮಾಡುತ್ತಿದ್ದಾರೆ ಎಂದು ಖಡಕ್ ಸಂದೇಶ ನೀಡಿದರು. ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಭದ್ರಾವತಿ ಕಾರ್ಖಾನೆ ಹಾಗೂ ಹೆಚ್ಎಂಟಿ ಪ್ರಾಜೆಕ್ಟ್‌ಗಳಿಗೆ ಅನುಮತಿ ನೀಡುವಲ್ಲಿ ರಾಜ್ಯ ಸರ್ಕಾರ ಹಿಂದೂ ಮುಂದು ನೋಡುತ್ತಿದೆ ಎಂದು ಟೀಕಿಸಿದರು. ಆದರೆ ಅವರು ಯಾರನ್ನೂ ನೇರವಾಗಿ ಟೀಕಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸ್ವತಃ ದೇವೇಗೌಡರು ತಮ್ಮ ಆರೋಗ್ಯದ ಕುರಿತು ಮಾತನಾಡುತ್ತಾ, “ನನಗೆ ಕಾಲಿಗೆ ತೊಂದರೆ ಇದ್ದರೂ ಬುದ್ಧಿಗೆ ಏನೂ ತೊಂದರೆ ಇಲ್ಲ” ಎಂದು ಹೇಳಿದರು. ಪಕ್ಷದ ಭವಿಷ್ಯವನ್ನು ಕುರಿತು ದೇವೇಗೌಡರು ದೃಢ ನಿಲುವು ಹೊಂದಿದ್ದು, “ನಾನು ಇಲ್ಲದಿದ್ದರೂ ಜೆಡಿಎಸ್ ಮುಂದುವರಿಯುತ್ತದೆ” ಎಂದು ಹೇಳಿದರು. ನಿಖಿಲ್ ಕುಮಾರಸ್ವಾಮಿ ಅವರು 58 ದಿನಗಳ ರಾಜ್ಯ ಪ್ರವಾಸವನ್ನು ಆರಂಭಿಸಲು ಸಜ್ಜಾಗಿದ್ದು, ಜನರು ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಿದ್ದಾರೆ ಎಂದು ಹೇಳಿದರು.