ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿಂಗಳುಗಳ ಹಿಂದೆ ಮೃತಪಟ್ಟ ತನ್ನ ನೌಕರಿಗೆ ವರ್ಗಾವಣೆ ಆದೇಶ ಹೊರಡಿಸಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಡವಟ್ಟು ಮಾಡಿಕೊಂಡಿದೆ.
ಇದು ಗಮನಕ್ಕೆ ಬರುತ್ತಲೇ ಆದೇಶವನ್ನು ಹಿಂಪಡೆಯಲಾಗಿದ್ದು, ತಪ್ಪು ಸರಿಪಡಿಸಿಕೊಳ್ಳಲಾಗಿದೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.
ಸಂಸ್ಥೆಯಲ್ಲಿ ಇನ್ಸ್ ಪೆಕ್ಟರ್ ವಿಭಾಗದ ನೌಕರರಾಗಿದ್ದ ಇ.ಜಿ. ಮಧು ಎಂಬವರು ಡಿಸೆಂಬರ್ ತಿಂಗಳಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಸಂಸ್ಥೆಯ ಸಿಎಂಡಿ ಸಹಿತ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದ್ದರಲ್ಲದೆ, ಮಾಲಾರ್ಪಣೆ ಕೂಡಾ ಮಾಡಿದ್ದರು. ಇದೀಗ ವರ್ಗಾವಣೆ ಪಟ್ಟಿ ಹೊರಬಿದ್ದಿದ್ದು, ಪಟ್ಟಿಯಲ್ಲಿ ಮಧು ಅವರ ಹೆಸರೂ ಸೇರಿರುವುದು ಗೊಂದಲಕ್ಕೆ ಕಾರಣವಾಗಿತ್ತು. ಈ ತಪ್ಪನ್ನು ಆಡಳಿತದ ಗಮನಕ್ಕೆ ತರಲಾಗಿದ್ದು, ತಕ್ಷಣವೇ ಸರಿಪಡಿಸಿಕೊಳ್ಳಲಾಗಿದೆ. ಮೃತ ಮಧು ಅವರನ್ನು ಸೇವಾ ಪಟ್ಟಿಯಿಂದ ತೆಗೆದುಹಾಕದೇ ಇರುವುದು ವರ್ಗಾವಣೆ ಪಟ್ಟಿಯಲ್ಲಿ ಅವರ ಹೆಸರು ಅಡಕವಾಗಲು ಕಾರಣವಾಗಿತ್ತು.