ಹೊಸದಿಗಂತ ವರದಿ ರಾಮನಗರ:
ಬಿಡದಿ ಟೌನ್‌ಶಿಫ್‌ಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ರೈತರ ನಡುವೆ ಒಂದೆಡೆ ಭೂಸ್ವಾಧೀನಕ್ಕಾಗಿ ಜಟಾಪಟಿ ನಡೆಯುತ್ತಿದೆ. ಕೆಲ ರೈತರು ಭೂಸ್ವಾಧೀನದ ಪರಿಹಾರ ಪಡೆದುಕೊಳ್ಳಲು ಮುಂದೆ ಬಂದಿದ್ದಾರೆ. ಈ ನಡುವೆ ಪರಿಹಾರವನ್ನು ಕಬಳಿಸಲು ಕೆಲಮಂದಿ ಸಂಚು ರೂಪಿಸಿದ್ದು, ವಂಚಕರ ಹುನ್ನಾರ ಜಿಬಿಡಿಎ (ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಜಿಬಿಡಿಎ ವಿಶೇಷಭೂಸ್ವಾಧೀನಾಧಿಕಾರಿ ಎರಡು ಎಫ್‌ಐಆರ್ ದಾಖಲಿಸಿದ್ದಾರೆ. ಇದರೊಂದಿಗೆ ಬಿಡಿದಿ ಟೌನ್‌ಶಿಫ್ ವಿಚಾರದಲ್ಲಿ ಪರವಿರೋಧ ಹೋರಾಟದ ಜೊತೆಗೆ ಅಮಾಯಕ ರೈತರನ್ನು ಯಾಮಾರಿಸಿ ಪರಿಹಾರದ ಹಣ ದೋಚಲು ಯತ್ನಿಸುತ್ತಿರುವ ಜಾಲವೊಂದು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ವಿವರ:
ಬಿಡದಿ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಟೌನ್‌ಶಿಫ್) ನಿರ್ಮಾಣ ಸಂಬಂಧ ಬಿಡದಿ ಸುತ್ತಮುತ್ತಲ 7400 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಈ ಸಂಬಂಧ 5 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಗೆ ಅಂತಿಮ ಅಧಿಸೂಚನೆ ಹೊರಡಿಸಿ ಭೂಸ್ವಾಧೀನ ಪ್ರಕ್ರಿಯೆಗೆ ಸಿದ್ದಮಾಡಿಕೊಂಡಿದೆ. 10 ಸಾವಿರಕ್ಕೂ ಹೆಚ್ಚು ರೈತರ ಭೂಮಿ ಸ್ವಾಧೀನಕ್ಕೆ ಒಳಪಡಲಿದೆ.
ಈ ನಡುವೆ ಕೆಲವೊಂದು ವ್ಯಕ್ತಿಗಳು ಭೂಸ್ವಾಧೀನದ ಪರಿಹಾರ ಪಡೆಯಲು ಸಂಚು ರೂಪಿಸಿ ಮೂಲ ಮಾಲೀಕರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಸುಮಾರು 5 ಕೋಟಿ ಭೂ ಪರಿಹಾರ ಪಡೆಯುವ ಷಡ್ಯಂತ್ರ ನಡೆಸಿದ್ದರು.
ಸೆ.2 ರಂದು ಭೂ ಮಾಲೀಕರ ಸೋಗಿನಲ್ಲಿ ಬಂದ ಎಚ್.ವೆಂಕಟೇಶ್ ಮತ್ತು ಎಚ್.ರಾಜಶೇಖರ್ ಎಂಬುವವರು ಅರಳಾಳುಸಂದ್ರ ಗ್ರಾಮದ ಸ.ನಂ.43/1ನ ಒಂದು ಎಕರೆ 1 ಗುಂಟೆ ನಮ್ಮದೆಂದು ಹೇಳಿದ್ದಾರೆ. ಭೂಸ್ವಾಧೀನದ ಒಪ್ಪಿಗೆ ಪತ್ರ ನೀಡಿದ್ದಾರೆ. ಬಿಡದಿ ಉಪತಹಶಿಲ್ದಾರ್ ಮಂಜುನಾಥ್, ರವರ ಡಿಜಿಟಲ್ ಸಹಿ ಹೊಂದಿರುವ ವಂಶವೃಕ್ಷ ಧೃಡೀಕರಣ ಪ್ರತಿ, ಗ್ರಾಮ ಆಡಳಿತಾಧಿಕಾರಿ ಸಹಿ ಹೊಂದಿರುವ ಭಾವಚಿತ್ರ ಹಾಗೂ ಸಹಿ ಧೃಡೀಕರಣ ಪತ್ರ, ವೆಂಕಟೇಶ್, ರಾಜಶೇಖರ್, ಮಂಜುಳ, ಸುಜಾತ ರವರ ಗುರುತಿನ ಚೀಟಿಗಳ ಪ್ರತಿಗಳನ್ನು ಸಲ್ಲಿದ್ದಾರೆ. ಕಚೇರಿ ಪರಿಶೀಲನೆಯಲ್ಲಿ ಮೇಲ್ನೊಟಕ್ಕೆ ದಾಖಲೆಗಳ ಮೇಲೆ ಅನುಮಾನ ವ್ಯಕ್ತವಾಗಿದೆ. ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸಿದಾಗ ಈ ದಾಖಲೆಗಳು ನಕಲಿ ಎಂದು ಬೆಳಕಿಗೆ ಬಂದಿದೆ.
ಅದೇ ದಿನ ಮತ್ತಿಬರು ಇದೇ ರೀತಿ ವಂಚನೆ ಮಾಡಲು ವಿಫಲ ಯತ್ನ ಮಾಡಿದ್ದಾರೆ. ಶಂಕರ್ ರೆಡ್ಡಿ ಮತ್ತು ಕೃಷ್ಣಾ ರೆಡ್ಡಿ ಎಂಬುವರು ಜಿಬಿಡಿಎ ಕಚೇರಿಗೆ ಆಗಮಿಸಿ ಅರಳಾಳುಸಂದ್ರ ಗ್ರಾಮದ ಸ.ನಂ.28/5 ರ .7 ಗುಂಟೆ ಜಮೀನು ನಮ್ಮೆದೆಂದು ಭೂ ಪರಿಹಾರ ಮೊತ್ತವನ್ನು ಕೋರಿ ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇಲ್ಲೂ ಸಹ ಭೂ ದಾಖಲೆಗಳು, ವಂಶವೃಕ್ಷ ಎಲ್ಲವೂ ನಕಲಿಯಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಮಕ್ಕಳು ಅಥವಾ ವಾರಸುದಾರರ ಹೆಸರಿಗೆ ಪೌತಿ ಖಾತೆ ಆಗದ ಜಮೀನು ದಾಖಲೆಗಳ ಮೇಲೆ ಭೂಗಳನ್ನು ಕಣ್ಣು ನಿಟ್ಟಿದ್ದಾರೆ. ಅರಳಾಸಲುಸಂದ್ರ ಗ್ರಾಮದ ಸ.ನಂ.43/1 ಜಮೀನಿನ ಮಾಲೀಕರು ಹೊನ್ನಾ ಬಿನ್ ದಾಸ ಎಂಬುವವರು. ಇವರು ಮೃತರಾಗಿದ್ದಾರೆ. ಆದರೂ ಜಮೀನು ಇವರ ಹೆಸರಲ್ಲೇ ಇದೆ. ವಂಚಕರು ಇವರ ಮಕ್ಕಳು ನಾವು ಎಂದು ನಕಲಿ ವಂಶವೃಕ್ಷ ಮಾಡಿಕೊಂಡಿದ್ದಾರೆ. ಇದೇ ರೀತಿ ಮತ್ತೊಂದು ಪ್ರಕರಣದಲ್ಲಿ ಮೂಲ ಮಾಲೀಕರಾದ ಸಿದ್ದರೆಡ್ಡಿಅವರು ಮೃತರಾಗಿದ್ದಾರೆ. ಇವರ ಮಕ್ಕಳು ನಾವು ಎಂದು ನಕಲಿ ವಂಶವೃಕ್ಷ ಸೃಷ್ಟಿಸಲಾಗಿದೆ.
ಇದನ್ನೂ ಓದಿ:
ನಮ್ಮ ಅಧಿಕಾರಿಗಳ ಸಮಯಪ್ರಜ್ಞೆಯಿಂದಾಗಿ ರೈತರ ಪರಿಹಾರದ ಹಣವನ್ನು ದೋಚಲು ಯತ್ನಿಸುತ್ತಿದ್ದು ಬಹಿರಂಗವಾಗಿದೆ. ನಮ್ಮ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಹೆಚ್ಚಿನ ತನಿಖೆ ನಡೆಸಬೇಕಿದೆ. ವ್ಯವಸ್ಥಿತ ಜಾಲವೊಂದ ಕೆಲಸ ಮಾಡುತ್ತಿರುವ ಕುರಿತು ಶಂಕೆ ವ್ಯಕ್ತವಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ತಿಳಿಸಿದರು.



